ಡಾ.ಸಿ.ಎನ್.ಮಂಜುನಾಥ್ ವಿರುದ್ಧ ತನಿಖೆ: ರಾಜ್ಯಸರ್ಕಾರದ ವಿರುದ್ಧ ಜನ ದಂಗೆ ಏಳ್ತಾರೆ ಎಂದ ಮಾಜಿ ಸಚಿವ

Jds-Melukote-C.S.Puttaraju mandya
Published on

ಮಂಡ್ಯ: ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಪಾರದರ್ಶಕವಾಗಿ ಆಡಳಿತ ನಡೆಸಿದ್ದು, ಅಂತಹವರ ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾದರೆ ಜನರೇ ದಂಗೆ ಏಳುತ್ತಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ಡಾ.ಮಂಜುನಾಥ್ ವಿರುದ್ಧ ತನಿಖೆಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿಗೆ ಸಂಬಂಧಿಸಿದಂತೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ಮಂಜುನಾಥ್ ಅವರ ಬಳಿ ಕ್ಷಮೆ ಕೇಳಲಿ. ಆರೋಗ್ಯ ಕ್ಷೇತ್ರದಲ್ಲಿ ಅವರು ಬಡವರ ಪರವಾಗಿ ಕೆಲಸ ಮಾಡಿದ್ದು, ಪಾರದರ್ಶಕವಾಗಿ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿದ್ದಾರೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥನ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ. ತನಿಖೆ ಹಿಂದೆ ನೂರಕ್ಕೆ ನೂರರಷ್ಟು ರಾಜಕೀಯ ದುರುದ್ದೇಶ ಇದೆ. ಹೃದಯವನ್ನು ಸರಿಪಡಿಸಿಕೊಂಡಿರುವ ಕುಟುಂಬಸ್ಥರು ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.

ಜಯದೇವ ಆಸ್ಪತ್ರೆ 10 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಕಾಂಗ್ರೆಸ್‌ನವರು ತಿಳಿದುಕೊಳ್ಳಬೇಕು. ಕಾಂಗ್ರೆಸ್ಸಿಗರಿಗೆ ಜಯದೇವ ಆಸ್ಪತ್ರೆಯ ಅಭಿವೃದ್ಧಿ ಕಾಣುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರೇ ಮಂಜುನಾಥ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇವತ್ತು ಅವರಿಗೆ ಅದೆಲ್ಲ ಮರೆತು ಹೋಗಿದೆಯೇ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಈ ಸಂಬಂಧ ಮರು ವಿಮರ್ಶೆ ಮಾಡಬೇಕು. ಜನರು ದಡ್ಡರಲ್ಲ, ಇದ್ಯಾವುದೂ ನಡೆಯುವುದಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಡಾ.ಮಂಜುನಾಥ್ ಅವರು ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಜನ ಗೆಲ್ಲಿಸುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net