

ಮಂಡ್ಯ: ಪ್ರಾಧಿಕಾರ ಸೂಚನೆ ಕೊಡದಿದ್ದರು ಅದಾಗಲೇ ಡ್ಯಾಂ ಗೇಟ್ ತೆಗೆದು ನೀರು ಬಿಡಲು ರಾಜ್ಯ ಸರ್ಕಾರ ನಿಂತಿರುತ್ತದೆ. ಆದೇಶ ಬಂದ ಒಂದು ಗಂಟೆಯಲ್ಲಿ ನೀರು ಹೆಚ್ಚಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದರಲ್ಲಿ ಉತ್ಸಾಹ ತೋರುವುದರ ಮೂಲಕ ಅವಿವೇಕತನ ನಿರ್ಧಾರ ಮಾಡುತ್ತಿದೆ ಎಂದು ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಾಗ್ದಾಳಿ ನಡೆಸಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಕಾವೇರಿ ಹೋರಾಟದಲ್ಲಿ ಶನಿವಾರ ಮಾತನಾಡಿದ ಅವರು, ಯಾವ ನ್ಯಾಯ ಮಂಡಲಿ ಮತ್ತು ಪ್ರಾಧಿಕಾರದಿಂದ ನ್ಯಾಯ ಸಿಗಲ್ಲ. ಕಾವೇರಿ ನೀರಿನ ವಿಚಾರದಲ್ಲಿ ಜಿಲ್ಲೆಯ ಹಾಲಿ ಶಾಸಕರು ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಮಾಜಿ ಶಾಸಕರ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದೇವೆ. ಅತ್ತ ಕಾವೇರಿ ಪ್ರಾಧಿಕಾರ ಬರೆಯ ಮೇಲೆ ಬರೆ ಹಾಕುತ್ತಿದೆ. ಇದರೊಂದಿಗೆ ಜಿಲ್ಲೆಯ ರೈತರನ್ನ ಪ್ರಾಧಿಕಾರ ಕೆಣಕುತ್ತಿದೆ. ಆದ್ದರಿಂದ ಚಳವಳಿಯನ್ನ ತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ದೊಡ್ಡ ಮಟ್ಟದಲ್ಲಿ ಚಳುವಳಿ ಮುಂದುವರೆಯುತ್ತದೆ. ನ್ಯಾಯಕ್ಕಾಗಿ ಹೋರಾಟ ಮಾಡಲೇಬೇಕಿದೆ ಎಂದರು.
ಪ್ರಾಧಿಕಾರದ ಆದೇಶ ಧಿಕ್ಕರಿಸಿ ರಾಜ್ಯಸರ್ಕಾರ ನೀರು ನಿಲ್ಲಿಸಬೇಕು. ಸರ್ಕಾರದೊಂದಿಗೆ ನಾವಿದ್ದೇವೆ, ಮಂಡ್ಯ ಜನರು ನಿಮ್ಮ ಜತೆ ನಿಲ್ಲುತ್ತಾರೆ. ಕುಡಿಯುವುದಕ್ಕಾದರೂ ನೀರು ಉಳಿಸಿಕೊಳ್ಳಿ. ಮತ್ತೆ ನಮಗೆ ನ್ಯಾಯ ಸಿಗಲಿದೆ ಎನ್ನುವ ಭರವಸೆ ಇತ್ತು. ಆದರೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಕರ್ನಾಟಕವನ್ನ ಕೈ ಬಿಟ್ಟಿದ್ದೆ. ಇದರಿಂದಾಗಿ ರಾಜ್ಯ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕುಡಿಯುವ ನೀರನ್ನು ಸಹ ಪ್ರಾಧಿಕಾರ ಒದಗಿಸಿ ಕೊಟ್ಟಿಲ್ಲ. ರಾಜ್ಯದ ಮುಖ್ಯಮಂತ್ರಿ ಜನರ ಪರ ನಿಲ್ಲಲಿ. ಯಾವುದೇ ಕಾರಣಕ್ಕೂ ನೀರು ಬಿಡಬೇಡಿ. ನೀರು ನಿಲ್ಲಿಸದಿದ್ದರೆ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ತಾಲೂಕು ಮಟ್ಟದಿಂದ ಚಳುವಳಿ ಮಾಡಲಾಗುವುದು. ಪ್ರಾಧಿಕಾರವನ್ನು ರದ್ದು ಪಡಿಸಿ, ಅದು ಅವಶ್ಯಕತೆ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳು ರೈತರ ಪರವಾಗಿ ಧೃಡ ನಿರ್ಧಾರ ತೆಗೆದುಕೊಳ್ಳಬೇಕು. ರಾಜಕೀಯ ಬಿಟ್ಟು ಕಾವೇರಿಗಾಗಿ ಕೈ ಜೋಡಿಸಿ. ಸಂಸದರು ಸಹ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.