ಮರಣ ಶಾಸನ ಬರೆಯುತ್ತಿರುವ ಪ್ರಾಧಿಕಾರ: ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಕ್ರೋಶ

Former JDS Minister C.S. Puttaraju supports Cauvery protest
Published on

ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡು ಪರವಾಗಿ ಆದೇಶವನ್ನು ಹೊರಡಿಸುವ ಮೂಲಕ ಕಾವೇರಿ ಕಣಿವೆ ಭಾಗದ ಜನರಿಗೆ ಮರಣ ಶಾಸನ ಬರೆಯುತ್ತಿದೆ ಎಂದು ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರಿನ ವಿಚಾರದಲ್ಲಿ ಕನ್ನಡಿಗರನ್ನು ಕೆಣಕುವ ರೀತಿಯಲ್ಲಿ ಆದೇಶವನ್ನು ನೀಡುತ್ತಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಕಳೆದ ಹಲವಾರು ದಿನಗಳಿಂದ ಒಗ್ಗಟ್ಟಿನ ಹೋರಾಟ ನಡೆಯುತ್ತಿದ್ದು, ಮುಂದೆಯೂ ಕೂಡ ಪಕ್ಷಾತೀತವಾಗಿ ಹಾಗೂ ಎಲ್ಲ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು.

ಈಗಾಗಲೇ ಬೆಂಗಳೂರು ಬಂದ್ ಯಶಸ್ವಿಯಾಗಿ ನಡೆದಿದೆ. ಸೆ.29ರಂದು ಕರ್ನಾಟಕ ಬಂದ್ ಇದ್ದು, ಜನರು ಹಾಗೂ ಸಂಘಟನೆಗಳು ಸಹಕಾರ ನೀಡಬೇಕಾಗಿದೆ. ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಕಿಚ್ಚನ್ನು ಎಲ್ಲರೂ ಮೈಗೂಡಿಸಿಕೊಂಡು ಒಗ್ಗಟ್ಟಿನ ಹೋರಾಟವನ್ನು ಮಾಡಬೇಕಿದೆ ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net