

ಉಡುಪಿ: ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಶೇಖರ್ ಪದ್ದು ಬಂಗೇರ (74 ) ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
80ರ ದಶಕದಲ್ಲಿ ಭಾರತ ತಂಡದ ಗೋಲ್‌ಕೀಪರ್ ಹಾಗೂ ನಾಯಕರಾಗಿ ಶೇಖರ್ ತಂಡವನ್ನು ಮುನ್ನಡೆಸಿದ್ದರು. ಇತ್ತೀಚೆಗೆ ಕೋವಿಡ್ ದೃಢಪಟ್ಟಿದ್ದರಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಉಡುಪಿ ಬಡಾನಿಡಿಯೂರಿನವರಾಗಿದ್ದ ಶೇಖರ್ ಬಹುಕಾಲ ಮುಂಬೈನಲ್ಲೇ ವಾಸವಾಗಿದ್ದರು. ಸಕ್ರಿಯ ಫುಟ್‌ಬಾಲ್‌ನಿಂದ ನಿವೃತ್ತರಾದ ಬಳಿಕ ಕೋಚ್ ಆಗಿದ್ದರು. 2017ರಲ್ಲಿ ಭಾಸ್ಕರ್ ಮಾಲ್ಟಿ, ಯೂಸುಫ್ ಅನ್ಸಾರಿ ಹಾಗೂ ಇತರ ಸಹ ಆಟಗಾರರೊಂದಿಗೆ ಸೇರಿ ಮುಂಬೈನಲ್ಲಿ ಗೋಲ್‌ಕೀಪರ್ಸ್ ಅಕಾಡೆಮಿ ಸ್ಥಾಪಿಸಿ ಯುವ ಪ್ರತಿಭೆಗಳಿಗೆ ಗೋಲ್‌ಕೀಪಿಂಗ್‌ನಲ್ಲಿ ತರಬೇತಿ ನೀಡುತ್ತಿದ್ದರು.
ಮುಂಬೈಯಲ್ಲಿದ್ದಾಗ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಅವರ ಅಂತ್ಯಕ್ರಿಯೆ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‌ನಲ್ಲಿ ಗುರುವಾರ ನಡೆಯಿತು.