

ಮಂಡ್ಯ: ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ ಮಂಡ್ಯ ವಿಶ್ವವಿದ್ಯಾನಿಲಯವನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡುವುದು ಒಳಿತು. ಅಂತೆಯೇ ಈ ಪ್ರಕ್ರಿಯೆಯಿಂದ ಜಿಲ್ಲೆಯ ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲೇ ಪದವಿ, ಸ್ನಾತಕೋತ್ತರ ಪಡೆಯಬಹುದು. ಇದರಲ್ಲಿ ಯಾವುದೇ ಸ್ಥಾನಪಲ್ಲಟವಾಗಲ್ಲ. ಮುಖ್ಯವಾಗಿ ಕುಲಸಚಿವರ ಬದಲು ಮೈಸೂರು ವಿವಿಯಿಂದಲೇ ಆಡಳಿತ ನಿರ್ದೇಶಕರನ್ನು ನೇಮಿಸಲಾಗುತ್ತದೆ ಎಂದು ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟರು.
ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಲು ಹೊರ ರಾಜ್ಯ ಮತ್ತು ದೇಶದಿಂದಲೂ ಬರುತ್ತಾರೆ. ಇಂತಹ ವಿವಿಯೊಂದಿಗೆ ಮಂಡ್ಯ ವಿವಿಯನ್ನು ವಿಲೀನ ಮಾಡಿದರೆ, ನಮ್ಮ ಜಿಲ್ಲೆಯ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಇದರಿಂದಾಗಿ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರ ವಿಶ್ವವಿದ್ಯಾಲಯಗಳ ಬಗ್ಗೆ ಅಧ್ಯಯನ ಮಾಡದೇ ಹಾಗೂ ಬೇಕಾದ ಮೂಲ ಸೌಕರ‌್ಯಗಳನ್ನು ಗಮನಿಸದೇ, ಯಾವುದೇ ತಜ್ಞರ ಸಮಿತಿ ವರದಿಯನ್ನು ಪಡೆಯದೇ ಸ್ವಇಚ್ಚೆಯಿಂದ ವಿಶ್ವವಿದ್ಯಾಲಯಗಳನ್ನಾಗಿ ಪರಿವರ್ತಿಸಿರುವುದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಬಹಳ ತೊಂದರೆಯಾಗಿದೆ. ಕೇವಲ ಒಂದು ಕುಲಪತಿ ಮತ್ತು ಕುಲಸಚಿವರ ಹುದ್ದೆಗಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಯ ಸ್ಥಾಪನೆಯ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ, ಭವಿಷ್ಯದ ಸಮಾಜಕ್ಕೆ ಅಣಿಗೊಳಿಸುವುದು. ಯುಜಿಸಿ ಹಾಗೂ ನ್ಯಾಕ್‌ನಲ್ಲಿ ಮಾನ್ಯತೆ ಪಡೆಯುವ ಸಾಮರ್ಥ್ಯ ಪಡೆಯದೇ, ಬೋಧಕರನ್ನೂ ನೇಮಕ ಮಾಡದೆ, ಉತ್ತಮ ಗ್ರಂಥಾಲಯ ಹಾಗೂ ಪ್ರಯೋಗಾಲಯಗಳನ್ನೇ ಹೊಂದಿರದಂತಹ ವಿವಿಗಳಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರಕುವುದೇ?. ಇಂತಹ ವಿವಿಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಹೊಸದಾಗಿ ಸ್ಥಾಪನೆಗೊಂಡಿರುವ ವಿವಿಗಳು ಹಳೆಯ ವಿವಿಗಳಿಗಿಂತ ಹೆಚ್ಚು ಶುಲ್ಕವನ್ನು ಕೆಲವು ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅಧಿಕ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ವಿವರಿಸಿದರು.
ಒಂದು ಹೊಸ ವಿಶ್ವವಿದ್ಯಾಲಯ ಸ್ಥಾಪಿತವಾದ 4 ವರ್ಷದ ನಂತರ ಆ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿ ಬೇರೊಂದು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸಿದರೆ ಮುಕ್ತ ಅವಕಾಶವಿಲ್ಲ. ಈ ಎಲ್ಲ ಅಂಶವನ್ನು ಸರ್ಕಾರ ಕೂಲಂಕಷವಾಗಿ ಚರ್ಚಿಸಿ, ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿ ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಇಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳನ್ನು ಉಳಿಸಿಕೊಂಡು ಎಂದಿನಂತೆ ಈ ಮೂರು ಜಿಲ್ಲೆಯ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯದಿಂದಲೇ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನೆ ಮಾಡಲು ಅವಕಾಶ ಕಲ್ಪಿಸಬೇಕು. ಮೈಸೂರು ವಿವಿಯಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳನ್ನು ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡುವ ಸಾಮರ್ಥ್ಯವಿರುವ ವಿವಿಯನ್ನು ಗುಣಾತ್ಮಕ ಶಿಕ್ಷಣ ನೀಡುವ ಸಾಮರ್ಥ್ಯ ಹೊಂದಿರುವ ವಿವಿಗಳಲ್ಲಿ ವಿಲೀನಗೊಳಿಸುವುದು. ವಿದ್ಯಾರ್ಥಿಗಳ ಹಾಗೂ ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು. ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸುವುದರಿಂದ ಈ ಮೂರು ಜಿಲ್ಲೆಯ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ, ಬದಲಾಗಿ ಅವರ ಭವಿಷ್ಯ ಉಜ್ವಲವಾಗುತ್ತದೆ. ಈ ಹಿಂದೆ ಸ್ಥಾಪನೆಯಾದ ಕೆಲ ವಿವಿ ಮೂಲ ಸೌಲಭ್ಯಗಳ ಕೊರತೆಯಿಂದ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಮೈಸೂರು ವಿವಿಯಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಉತ್ತಮ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಸಂಶೋಧಕರು, ಮೂಲ ಸೌಕರ್ಯ, ಪಠ್ಯೇತರ ಚಟುವಟಿಕೆಗಳು, ಉತ್ತಮ ಪರಿಸರ ಹಾಗೂ ಪ್ರಬುದ್ಧ ಪ್ರಾಧ್ಯಾಪಕರಿಂದ ಕೂಡಿದೆ ಎಂದು ಹೇಳಿದರು.
ಕಾಲೇಜು ಶಿಕ್ಷಣದ ವಿಶ್ರಾಂತ ಜಂಟಿ ನಿರ್ದೇಶಕ ಡಾ.ಎಂ.ರಾಮೇಗೌಡ, ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಎಸ್.ರಾಮು, ಪ್ರೊ. ನಾಗಾನಂದ್, ಕೀಲಾರ ಜಯರಾಮು, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಶಂಕರೇಗೌಡ ಹಾಜರಿದ್ದರು.