

ಮುದ್ದೇಬಿಹಾಳ: ರೈತ ಅನುವುಗಾರರನ್ನು ಕೃಷಿ ಇಲಾಖೆಯಲ್ಲಿ ನೇಮಕಾತಿಮಾಡಿಕೊಳ್ಳುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಕೃಷಿ ಇಲಾಖೆಯ ರೈತ ಅನುವುಗಾರ ಸಂಘದ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ಅನುವುಗಾರರು, ತಹಸೀಲ್ದಾರ್ ಪರವಾಗಿ ಶಿರಸ್ತೆದಾರ ಎ.ಬಿ. ಹಿರೇಮಠರಿಗೆ ಮನವಿ ನೀಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ವೈ. ಚಲವಾದಿ ಮಾತನಾಡಿ, ಕೃಷಿ ಇಲಾಖೆಯಲ್ಲಿ 12 ವರ್ಷಗಳಿಂದ ಭೂಚೇತನ ಯೋಜನೆಯಡಿ ರೈತ ಕ್ಷೇತ್ರಪಾಠ ಶಾಲೆ, ಮಣ್ಣು ಪರೀಕ್ಷೆ, ಬೆಳೆ ಖಟಾವು ಸಮೀಕ್ಷೆ, ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಸೇರಿ ಇಲಾಖೆ ಹಾಗೂ ರೈತರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದೇವು. ಆದರೆ, ಸರ್ಕಾರ ಈಗ ಕೃಷಿ ಇಲಾಖೆಯಲ್ಲಿ ಹೊಸದಾಗಿ ರೈತಮಿತ್ರ ನೇಮಕಾತಿಗೆ ಎಂದು ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಿಸುವುದಾಗಿ ಸರ್ಕಾರ ಚಿಂತನೆ ನಡೆಸಿದ್ದು ಇದು ಅನುವುಗಾರರನ್ನು ಬೀದಿಗೆ ತರುವ ಹುನ್ನಾರವಾಗಿದೆ ಎಂದು ದೂರಿದರು.
ತಾಲೂಕಾಧ್ಯಕ್ಷ ಅಯ್ಯನಗೌಡ ಪಾಟೀಲ ಮಾತನಾಡಿ, ರೈತಮಿತ್ರ ನೇಮಕಾತಿಗೆ ಎರಡು ವರ್ಷ ಡಿಪ್ಲೊಮಾ ಕಲಿತ ವಿದ್ಯಾರ್ಥಿಗಳನ್ನು ಕೈ ಬಿಟ್ಟು ಈಗಾಗಲೇ ಇಲಾಖೆಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸಿರುವ ಅನುವುಗಾರರನ್ನು ನೇಮಕಾತಿ ಮಾಡಿಕೊಳ್ಳಬೇಕು. ನಮ್ಮ ಕುಟುಂಬಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಎ.ಬಿ. ಪೂಜಾರಿ, ಕೆ.ಎನ್. ಪಾಟೀಲ, ಪ್ರಭಯ್ಯ ಹಿರೇಮಠ, ಕುಮಾರಗೌಡ ಪಾಟೀಲ, ಗುರುಲಿಂಗಯ್ಯ ಹಿರೇಮಠ ಮತ್ತಿತರರಿದ್ದರು.