ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಡಿಸಿಎಂ ಭೇಟಿ

oplus_2
ಸೋಮವಾರಪೇಟೆ ಸಮೀಪದ ಯಡೂರು ಗ್ರಾಮದ ಜೇಡಿಗುಂಡಿ ಸಮೀಪದ ಭೂಕುಸಿತವನ್ನು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ ಗೌಡ ವೀಕ್ಷಿಸಿದರು. ಬೋಪಯ್ಯ, ಅಪ್ಪಚ್ಚು ರಂಜನ್, ರವಿ ಕಾಳಪ್ಪ, ಮೇದಪ್ಪ ಇದ್ದರು.
Published on

ಸೋಮವಾರಪೇಟೆ: ತಾಲೂಕಿನ ಶಾಂತಳ್ಳಿ, ಹಾರಣೆ, ಶನಿವಾರಸಂತೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಗೌಡ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಅತಿ ಹೆಚ್ಚು ಮಳೆಯಾಗಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಕೊಳೆರೋಗಕ್ಕೆ ತುತ್ತಾಗಿರುವ ಕಾಫಿ ತೋಟವನ್ನು ಪರಿಶೀಲಿಸಿ, ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿ, ಮಾಜಿ ಸಚಿವ ಅಪ್ಪಚ್ಚು ರಂಜನ್ ಅವರ ಮೂಲಕ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಶಾಂತಳ್ಳಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಗುಡ್ಡ ಕುಸಿತ, ಬಸವನಕಟ್ಟೆ, ನಗರಹಳ್ಳಿಯಲ್ಲಿ ಕಾಫಿ ತೋಟವನ್ನು ವೀಕ್ಷಿಸಿದರು. ಮಳೆ-ಗಾಳಿಗೆ ಕಾಫಿ ತೋಟದಲ್ಲಿ ಭಾರೀ ಪ್ರಮಾಣದ ನಷ್ಟವಾಗಿದ್ದು, ಮರಗಳು ಬಿದ್ದು ಕಾಫಿ ಗಿಡಗಳು ಮುರಿದಿರುವುದು ಒಂದೆಡೆಯಾದರೆ, ಅತಿಯಾದ ಮಳೆಗೆ ಕೊಳೆರೋಗ ಬಂದು ಕಾಫಿ ಕಾಯಿಗಳು ನೆಲಕ್ಕೆ ಬಿದ್ದಿರುವುದರಿಂದ ಸಲು ನಷ್ಟ ಅನುಭವಿಸಬೇಕಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ತಕ್ಷಣ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಸ್ಥಳೀಯ ಕೃಷಿಕರು, ಶಾಸಕರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಆಗಿರುವ ಹಾನಿ ಬಗ್ಗೆ ಖುದ್ದು ವೀಕ್ಷಿಸಲಾಗಿದೆ. ಈ ಹಿಂದೆ ಮಳೆ ಹಾನಿಯಾದಾಗ, ಬಿಜೆಪಿ ಸರ್ಕಾರ ಹಾಗೂ ಕೊಡಗಿನಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದ ಸಂದರ್ಭ ತಕ್ಷಣ ಪರಿಹಾರ ಒದಗಿಸಲಾಗಿತ್ತು. ಸಂತ್ರಸ್ತರಿಗೆ ಸೂಕ್ತ ಸ್ಪಂದನೆ ನೀಡಲಾಗಿತ್ತು. ಈಗಿನ ಸರ್ಕಾರ ತುರ್ತು ಪರಿಹಾರ ನೀಡಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ತಕ್ಷಣ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಒತ್ತಾಯಿಸಲಾಗುವುದು ಎಂದು ಅಶ್ವತ್ಥನಾರಾಯಣ ಗೌಡ ತಿಳಿಸಿದರು.
ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ತಾಲೂಕು ಅಧ್ಯಕ್ಷ ಗೌತಮ್, ಮಾಜಿ ಎಂಎಲ್ಸಿ ಮೇದಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net