ಬಂಗಾರಪ್ಪ ಕಾಲನಿಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಭೇಟಿ

kse visit raagigudda
ಶಿವಮೊಗ್ಗ ರಾಗಿಗುಡ್ಡದ ಬಂಗಾರಪ್ಪ ಕಾಲನಿಯಲ್ಲಿ ಕಿಡಿಗೇಡಿಗಳಿಂದ ಧ್ವಂಸಗೊಂಡ ಗಣೇಶ ಮೂರ್ತಿಯನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪರಿಶೀಲಿಸಿದರು. ಕೆ.ಇ.ಕಾಂತೇಶ್, ಇ.ವಿಶ್ವಾಸ್, ಮೋಹನ್ ಜಾಧವ್ ಇದ್ದರು.
Published on

ಶಿವಮೊಗ್ಗ: ಬಂಗಾರಪ್ಪ ಕಾಲನಿಯಲ್ಲಿ ವಿಗ್ರಹಗಳ ಧ್ವಂಸ ಮತ್ತು ಕಾಲಿನಿಂದ ಒದ್ದು ವಿಕೃತಿ ಮೆರೆದ ಸ್ಥಳಕ್ಕೆ ಮಾಜಿ ಡಿಸಿಎಂ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಸ್ಥಳೀಯರಿಂದ ಮಾಹಿತಿ ಪಡೆದ ಅವರು, ಪೊಲೀಸ್ ಇಲಾಖೆ ವರ್ತನೆಗೆ ಗರಂ ಆದರು. ಅನ್ಯಕೋಮಿನ ಕಿಡಿಗೇಡಿಗಳಿಬ್ಬರು ಕೃತ್ಯವೆಸಗಿದ್ದಾರೆ. ಅದೇ ಹಿಂದುಗಳು ಈ ಕೆಲಸ ಮಾಡಿದ್ದರೆ ನೀವು ಸುಮ್ಮನಿರುತ್ತಿದ್ದೀರಾ ಎಂದು ಪೊಲೀಸರನ್ನು ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಅನ್ಯಕೋಮಿನ ಕಿಡಿಗೇಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಕಿಡಿಗೇಡಿಗಳು ಮೆರೆಯುತ್ತಿದ್ದಾರೆ. ತಕ್ಷಣವೇ ಮೂರ್ತಿಗಳ ಧ್ವಂಸ ಮತ್ತು ಅಪಮಾನ ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.

ದೇವಸ್ಥಾನ ನಿರ್ಮಾಣಕ್ಕೆ ನೆರವಿನ ಭರವಸೆ

ಕಾಲನಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಕಮಿಟಿ ರಚಿಸಬೇಕು. ಅದಕ್ಕೆ ಬೇಕಾದ ಸಹಾಯವನ್ನು ಮಾಡುತ್ತೇನೆ. ಸ್ಥಳದ ಎದುರು ಇರುವ ವಿವಾದಿತ ಒತ್ತುವರಿ ಕಟ್ಟಡವನ್ನು ಶೀಘ್ರವೇ ಮಹಾನಗರ ಪಾಲಿಕೆ ತೆರವುಗೊಳಿಸಬೇಕು ಎಂದರು. ಸ್ಥಳದಲ್ಲೇ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ದೇವಸ್ಥಾನದ ಎದುರಿನ ಅಕ್ರಮ ಕಟ್ಟಡವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಸೂಚಿಸಿದರು. ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ಮೋಹನ್ ಜಾಧವ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net