ಆಜಾನ್ ಶಬ್ದ ನಿಯಂತ್ರಣಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹ

rastrabhaktara balaga
Published on

ಶಿವಮೊಗ್ಗ: ಮಸೀದಿಗಳಲ್ಲಿ ಆಜಾನ್ ಕೂಗುವಾಗ ಉಂಟಾಗುವ ಅತಿಯಾದ ಶಬ್ದಮಾಲಿನ್ಯ ನಿಯಂತ್ರಿಸಲು ಹೊಸ ತಂತ್ರಾಂಶ ಬಳಸುವಂತೆ ರಾಜ್ಯ ಸರ್ಕಾರ ಮಸೀದಿಗಳಿಗೆ ಸೂಚಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ಶಬ್ದಮಾಲಿನ್ಯ ತಡೆಯಲು ಧ್ವನಿವರ್ಧಕಗಳ ಶಬ್ದದ ಮಿತಿಯನ್ನು ಹಗಲಿನಲ್ಲಿ 50 ಡೆಸಿಬಲ್ ಮತ್ತು ರಾತ್ರಿ 45 ಡೆಸಿಬಲ್ ಎಂದು ಆದೇಶಿಸಿದೆ. ಆದರೂ ಕೆಲವು ಮಸೀದಿಗಳಲ್ಲಿ ಈ ಮಿತಿಗಳನ್ನು ಮೀರಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮಹಾರಾಷ್ಟ್ರದಲ್ಲಿ ಶಬ್ದಮಾಲಿನ್ಯದ ವಿರುದ್ಧ ನಡೆದ ಹೋರಾಟದಲ್ಲಿ 1500ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದರೂ ಆಜಾನ್ ಶಬ್ದದಲ್ಲಿ ಇಳಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸದಾಗಿ ಬಿಡುಗಡೆ ಆಗಿರುವ ಉಚಿತ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಶಬ್ದಮಾಲಿನ್ಯ ತಡೆಯಬಹುದು ಎಂದರು.

ತಮಿಳುನಾಡಿನ ಕೆಲವು ಐಟಿ ತಂತ್ರಜ್ಞರು ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ಅಲ್ಲಿನ ಕೆಲವು ಮಸೀದಿಗಳು ಇದನ್ನು ಯಶಸ್ವಿಯಾಗಿ ಬಳಸುತ್ತಿವೆ. ಈ ಅಪ್ಲಿಕೇಶನ್ ಬಳಸುತ್ತಿರುವ ಮಹೀಮ್ ಜುಮ್ಮಾ ಮಸೀದಿಯ ಫಹಾದ್ ಖಲೀಲ್ ಪಠಾಣ್ ಎಂಬುವರು ಆಜಾನ್ ಶುರುವಾಗುವಾಗ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡಿರುವವರ ಮೊಬೈಲ್‌ಗೆ ಸಂದೇಶ ಹೋಗುತ್ತದೆ. ಅದನ್ನು ತೆರೆದು ಕ್ಲಿಕ್ ಮಾಡಿದಾಗ ಅವರಿಗೆ ಮಾತ್ರ ಆಜಾನ್ ಕೇಳಿಸುತ್ತದೆ. ಇದರಿಂದ ಸುತ್ತಮುತ್ತಲಿನ ಸಮುದಾಯದ ಜನರಿಗೆ ನೇರವಾಗಿ ಆಜಾನ್ ಕೇಳಿಸುವ ಮೂಲಕ ಅತಿಯಾದ ಶಬ್ದಮಾಲಿನ್ಯ ಉಂಟಾಗುವುದಿಲ್ಲ ಎಂದು ವಿವರಿಸಿದರು.

ಪ್ರಮುಖರಾದ ಮಹಾಲಿಂಗ ಶಾಸಿ, ಕೆ.ಇ.ಕಾಂತೇಶ್, ಇ.ವಿಶ್ವಾಸ್, ನಾಗರಾಜ್, ಮೋಹನ್ ಜಾಧವ್, ಉಮೇಶ್ ಆರಾಧ್ಯ, ವಾಗೀಶ್, ರಾಜು, ಲೋಕೇಶ್, ಚನ್ನಬಸಪ್ಪ, ಶಂಕರ್, ಶಿವು, ಶ್ರೀಕಾಂತ್, ಕುಬೇರಪ್ಪ, ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net