

ಮಂಡ್ಯ: ನೀರಿಲ್ಲದೆ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂನಂತೆ ಪರಿಹಾರ ಘೋಷಣೆ ಮಾಡಬೇಕು. ಅಂತೆಯೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೇಳಿರುವಂತೆ ಸಂಕಷ್ಟದ ಸಮಯದಲ್ಲಿ ತಮಿಳುನಾಡಿನೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತುಕತೆ ಪ್ರಕ್ರಿಯೆ ಆರಂಭಿಸಬೇಕು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಆಗ್ರಹಿಸಿದರು.
ಸರ್‌ಎಂವಿ ಪ್ರತಿಮೆ ಎದುರು ಜಿಲ್ಲಾ ರೈತಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಆರಂಭದಿಂದಲೂ ಮೈಮರೆತಿದೆ. ಇಂತಹ ನಿರ್ಲಕ್ಷೃ ಧೋರಣೆಯಿಂದ ರೈತರು ಕಷ್ಟ ಪಡಬೇಕಾಗಿದೆ. ಬೆಳೆದು ನಿಂತಿರುವ ಬೆಳೆಗೂ ನೀರಿಲ್ಲ, ಕುಡಿಯಲು ನೀರಿಲ್ಲ. ಆದರೂ ಸಹ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವಿನಿಂದ ಅನ್ನದಾತರಿಗೆ ದೊಡ್ಡ ಅನ್ಯಾಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ರೈತರ ಹಿತ ಮುಖ್ಯವಲ್ಲ. ನೀರಿಲ್ಲದೆ ನಮ್ಮಲ್ಲಿ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪ್ರಾಧಿಕಾರದ ಎದುರು ಮಂಡಿಸುವಲ್ಲಿ ವಿಫಲವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಕೂಡಲೇ ತ.ನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕಾವೇರಿ ನೀರಿನ ವಿಚಾರದಲ್ಲಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.