

ಮಂಡ್ಯ: ಡಿ.ಕೆ.ಶಿವಕುಮಾರ್ ನಮ್ಮ ಪಕ್ಷಕ್ಕೆ ಬಂದರೆ ತಡೆಯುವುದಕ್ಕೆ ನಾವ್ಯಾರು. ಆದರೆ ಅವರು ಪಕ್ಷಕ್ಕೆ ಬರುತ್ತಾರೆ ಎನ್ನುವುದು ಅನುಮಾನ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್‌ನಾರಾಯಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಅವರ ಆ ಪಕ್ಷಕ್ಕೆ ನಿಷ್ಠೆಯಾಗಿದ್ದಾರೆ. ಆದ್ದರಿಂದ ನಾವ್ಯಾಕೆ ಅವರಿಗೆ ಅಗೌರವ ಸೂಚಿಸಬೇಕು. ಮಸಿ ಬಳಿಯುವಂತ ಕೆಲಸ ನಾವ್ಯಾಕೆ ಮಾಡಬೇಕು. ಆ ಪಕ್ಷದಲ್ಲಿಯೇ ಗುದ್ದಾಟ ನಡಿತಿದೆ. ಯಾವ ಮಟ್ಟಕ್ಕೆ ಸರ್ಕಾರ ಹೋಗಲಿದೆ ಎನ್ನುವುದು ಕಾದುನೋಡೋಣ. ಅವರವರೇ ಆ ಸರ್ಕಾರಕ್ಕೆ ದಾರಿ ತೋರಿಸುತ್ತಾರೆ ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಪವಿತ್ರ ಸ್ಥಳದ ಮೇಲೆ ಇರುವ ಅಪನಂಬಿಕೆ ದೂರಾಗಬೇಕು. ಕೆಲ ಸಂಘಟನೆಗಳು ನಮ್ಮ ನಂಬಿಕೆ ಕೇಂದ್ರದ ಬಗ್ಗೆ ಮಾತನಾಡುವ ಆಗಿದೆ. ಇದಕ್ಕೆ ಪೂರಕವಾಗಿ ಕುಮ್ಮಕ್ಕು ಕೊಡುವವರು ಇದ್ದಾರೆ. ಅಗ್ನಿ ಪರೀಕ್ಷೆ ಎದುರಿಸಲು ಅವರು ಸಿದ್ಧರಿದ್ದಾರೆ. ಬೇಗ ತನಿಖೆ ನಡೆದು ಸತ್ಯ ಹೊರಬರಲಿ. ಯೂಟ್ಯೂಬರ್ ಮಾಡುತ್ತಿರುವ ವಿಡಿಯೋ ನೋಡಿದರೆ ಎಲ್ಲ ವ್ಯವಸ್ಥಿತ ಎನ್ನಿಸುತ್ತಿದೆ. ನಮ್ಮ ನಂಬಿಕೆ ಕೇಂದ್ರಗಳ ಬಗ್ಗೆ ಸುಳ್ಳು ಹೇಳುವವರು ಅಲ್ಲಿದ್ದಾರೆ. ಅವರ ಮೇಲು ಕೂಡ ಸೂಕ್ತ ತನಿಖೆ ಆಗಬೇಕು. ಆರೋಪ ಮಾಡುತ್ತಿರುವವರನ್ನು ಕೂಡ ಸರ್ಕಾರ ತನಿಖೆಗೆ ಒಳಪಡಿಸಬೇಕು. ಹಣ ಎಲ್ಲಿಂದ ಬರಲಿದೆ, ಹಿಂದೆ ಯಾರಿದ್ದಾರೆ ಎಂದೂ ತನಿಖೆ ಆಗಲಿ ಎಂದ ಅವರು, ಅತ್ಯಾಚಾರ ಕೇಸ್‌ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾನೂನನ್ನು ಎಲ್ಲರೂ ಗೌರವಿಸಬೇಕು. ಮುಂದೆ ಏನಾಗಲಿದೆ ಎನ್ನುವುದನ್ನು ಕಾದು ನೋಡೋಣ ಎಂದು ಹೇಳಿದರು.