

ಮಂಡ್ಯ: ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಏಳು ಸ್ಥಾನವನ್ನೂ ಜೆಡಿಎಸ್ ಗೆದ್ದಿತ್ತು. ಆದರೂ ಅಭಿವೃದ್ಧಿ ಮಾಡಲಿಲ್ಲ. ಇದೀಗ ನಮ್ಮ ಸರ್ಕಾರದ ಟೀಕೆ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ವ್ಯಂಗ್ಯವಾಡಿದರು.
ಒಕ್ಕಲಿಗರ ನಾಯಕರೆಂದು ಹೇಳಿಕೊಳ್ಳುವ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ನಿಂದ ಜಿಲ್ಲೆಗೆ ಸಿಕ್ಕ ಕೊಡುಗೆಯಾದರೂ ಏನು?. ಒಕ್ಕಲಿಗ ಸಮುದಾಯವರನ್ನು ಬೆಳೆಯಲು ಬಿಡದೇ ಅವರ ರಾಜಕೀಯ ಜೀವನ ಹಾಳು ಮಾಡಿದ್ದೀರಿ. ಇದರಿಂದಾಗಿಯೇ ಹಲವರು ಜೆಡಿಎಸ್ ತೊರೆದು ಬೇರೆ ಬೇರೆ ಪಕ್ಷಗಳಿಗೆ ಹೋಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಮನ್‌ಮುಲ್ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಬೋರೇಗೌಡ ಆಯ್ಕೆಯಾಗಿರುವುದನ್ನು ಸಹಿಸದ ಜೆಡಿಎಸ್ ಮಾಜಿ ಶಾಸಕರು ನಮ್ಮ ನಾಯಕ ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಳೆದ ಎಂಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು ಬಹುಮತ ಇದ್ದರೂ ನಮ್ಮ ನಿರ್ದೇಶಕರನ್ನು ಅನರ್ಹಗೊಳಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಾಗ ನಾವು ಕಾನೂನು ಹೋರಾಟ ಮಾಡಿ ಜಯಗಳಿಸಿದ್ದೇವೆ. ಅದೇ ರೀತಿ ಅವರಿಗೆ ಅನ್ಯಾಯವಾಗಿದ್ದರೆ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕು. ಅದು ಬಿಟ್ಟು ಗೂಂಡಾ ಸಂಸ್ಕೃತಿಯ ರೀತಿಯಲ್ಲಿ ಸಹಕಾರ ಸಂಘಗಳ ಕಚೇರಿಗೆ ಹೋಗಿ ಗಲಾಟೆ ಮಾಡುವುದು. ಸಾರ್ವಜನಿಕವಾಗಿ ನಮ್ಮ ನಾಯಕರನ್ನು ನಿಂದಿಸುವಂತಹ ಕೆಲಸ ಜೆಡಿಎಸ್‌ನವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜೇಗೌಡ, ನಗರಸಭಾ ಸದಸ್ಯರಾದ ಶ್ರೀಧರ್, ನಯೀಂ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಉಸ್ತುವಾರಿ ನಂದೀಶ್ ಇದ್ದರು.