

ಬೆಂಗಳೂರು: 2025-26ನೇ ಸಾಲಿನ ಆಯವ್ಯಯವನ್ನು ಮಂಡಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಸಿಎಂ ಎಂಬ ಹೆಗ್ಗಳಿಕೆಗೆ ಈ ಸಾಲಿನ ಬಜೆಟ್ಅನ್ನು ಕಾಂಗ್ರೆಸ್ ನಾಯಕರು ಹಾಡಿಹೊಗಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕುರಿತು ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ರಾಜ್ಯದ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಬಜೆಟ್ ಸಾಗಿದೆ ಎಂದು ಹೇಳಿದ್ದಾರೆ.
16ನೇ ಬಾರಿಗೆ ಬಜೆಟ್ ಮಂಡಿಸಿದ ದಾಖಲೆ ಬಿಟ್ಟರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಶುಕ್ರವಾರ, ಮಾರ್ಚ್ 7) ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ತಮ್ಮ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯನ್ನು ಬಜೆಟ್ಗೂ ವಿಸ್ತರಿಸಿದ್ದೇ ಈ ಸರ್ಕಾರದ ಸಾಧನೆಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬಜೆಟ್ನಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಧರ್ಮಾಧಾರಿತ ಮೀಸಲಾತಿ ನೀಡುವ ಮೂಲಕ ಸಂವಿಧಾನದ ಸದಾಶಯಗಳನ್ನು ಗಾಳಿಗೆ ತೂರಿರುವುದು, ಸಾಲದ ಹೊರೆ ಹೆಚ್ಚಿಸಿರುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿಯತ್ತ ನಿರ್ಲಕ್ಷ್ಯ, ಕಳೆದ ಬಜೆಟ್ ಘೋಷಣೆಗಳ ಅನುಷ್ಠಾನದ ಬಗ್ಗೆ ಮೌನ, ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಜೆಟ್ನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿಲ್ಲ ಎಂದು ಹೇಳಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ರೈತರಿಗಾಗಿ ಬಜೆಟ್ನಲ್ಲಿ ಯಾವುದೇ ವಿಶೇಷ ಯೋಜನೆ ನೀಡಿಲ್ಲ. ರೈತರ ಆದಾಯ ಹೆಚ್ಚಳಕ್ಕೆ ಯಾವುದೇ ಕ್ರಮಗಳಿಲ್ಲ. ಸ್ಪಷ್ಟತೆಯಿಲ್ಲದ ಈ ಬಜೆಟ್ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ತಿಳಿಸಿದ್ದಾರೆ.