ಮಾಜಿ ಸಿಎಂ ಕುಮಾರಸ್ವಾಮಿಗೆ ಕರೊನಾ ಪಾಸಿಟಿವ್​: ಜ್ವರ, ಮೈಕೈ ನೋವು; ಮನೆಯಲ್ಲೇ ಐಸೋಲೇಷನ್..

HDK
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಮತ್ತೆ ಕರೊನಾ ಸೋಂಕು ತಗುಲಿದೆ. ಅನಾರೋಗ್ಯ ಕಾಣಿಸಿದ ಹಿನ್ನೆಲೆಯಲ್ಲಿ ಅವರು ಇಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಸಣ್ಣ ಪ್ರಮಾಣದ ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್ ಎಂದು ಬಂದಿದೆ. ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ, ವೈದ್ಯರು ಹೋಮ್ ಐಸೋಲೇಷನ್​ನಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ವೈದ್ಯರ ಸೂಚನೆಯಂತೆ, ನಾನು 10 ದಿನಗಳ ಕಾಲ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತೇನೆ. ದಯಮಾಡಿ ಯಾರೂ ನನ್ನ ಭೇಟಿಗೆ ಬರಬಾರದೆಂದು ವಿನಂತಿಸುತ್ತೇನೆ. ಯಾರೂ ಅನ್ಯಥಾ ಭಾವಿಸಬಾರದು. ಮೂರ್ನಾಲ್ಕು ದಿನಗಳಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರೆಲ್ಲರೂ ತಪ್ಪದೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಕೋರುತ್ತೇನೆ ಎಂಬುದಾಗಿಯೂ ಅವರು ಮನವಿ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಈ ಹಿಂದೆಯೂ ಕೋವಿಡ್ ಸೋಂಕಿಗೆ ಒಳಗಾಗಿದ್ದರು.

ರಾಷ್ಟ್ರಪತಿ ಸ್ಥಾನಕ್ಕೆ ಎನ್​ಡಿಎ ಅಭ್ಯರ್ಥಿ ಆಗಿ ಆಯ್ಕೆ ಆಗಿರುವ ದ್ರೌಪದಿ ಮುರ್ಮು ಅವರು ನಿನ್ನೆಯಷ್ಟೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರನ್ನು ಭೇಟಿಯಾಗಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿಕೊಂಡಿದ್ದರು.

ಈ ಸಂದರ್ಭದಲ್ಲಿ ದ್ರೌಪದಿ ಮುರ್ಮು ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮುಂತಾದವರೂ ದೇವೇಗೌಡರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್​.ಡಿ.ರೇವಣ್ಣ, ದೇವೇಗೌಡರ ಪತ್ನಿ ಚನ್ನಮ್ಮ ಮಾತ್ರವಲ್ಲದೆ ಅವರ ಕುಟುಂಬದ ಹಲವಾರು ಸದಸ್ಯರು ಉಪಸ್ಥಿತರಿದ್ದು, ಮುರ್ಮು ಮತ್ತಿತರರನ್ನು ವಿಶೇಷವಾಗಿ ಸತ್ಕರಿಸಿ ಕಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net