

ಬೆಂಗಳೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಯಾರು ಉದ್ಘಾಟಿಸುತ್ತಾರೆ, ಮಹತ್ವದ ಹಬ್ಬಕ್ಕೆ ಯಾರು ಚಾಲನೆ ನೀಡುತ್ತಾರೆ ಎಂಬುದೇ ಪ್ರತಿವರ್ಷದ ಒಂದು ದೊಡ್ಡ ಕುತೂಹಲ. ಈ ಬಾರಿಯ ಅಂಥದ್ದೊಂದು ಕುತೂಹಲಕ್ಕೆ ತೆರೆ ಬಿದ್ದಿದೆ.
ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ಈ ಸಲದ ನಾಡಹಬ್ಬ ದಸರೆಗೆ ಚಾಲನೆ ನೀಡಲಿದ್ದಾರೆ. ಮಾತ್ರವಲ್ಲ ಈ ಕುರಿತು ಇದೀಗ ಅಧಿಕೃತ ಮಾಹಿತಿಯೇ ಹೊರಬಿದ್ದಿದೆ. ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ವಿಷಯ ಖಚಿತಪಡಿಸಿದ್ದಾರೆ.
ಅಕ್ಟೋಬರ್ 7ರಿಂದ ಆರಂಭವಾಗಲಿರುವ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಲು ಹಿರಿಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಆಹ್ವಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದಸರಾ ಹಬ್ಬದ ಸಿದ್ಧತೆ ಕುರಿತು ಚರ್ಚಿಸಲು ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.