ಸೇಫ್ ಕ್ಷೇತ್ರಕ್ಕೆ ಸಿದ್ದರಾಮಯ್ಯ ಹುಡುಕಾಟ: ಏಳು ವಿಧಾನಸಭಾ ಕ್ಷೇತ್ರದಿಂದ ಆಹ್ವಾನ; ಎರಡು ಮಾತ್ರ ಸುರಕ್ಷಿತ?

Siddaramaiah
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಚಾವಡಿಯಲ್ಲಿ ಬಗೆಬಗೆ ಆಯಾಮದಲ್ಲಿ ಚರ್ಚೆಯಾಗುತ್ತಿದೆ. 2023ರಲ್ಲಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕಿಳಿಯಬಹುದು? ಯಾವ ಕ್ಷೇತ್ರ ಅನುಕೂಲ? ಯಾವ ಕ್ಷೇತ್ರ ಎಷ್ಟು ಸೇಫ್? ಹೀಗೆ ವಿಶ್ಲೇಷಣೆ ಮತ್ತು ವರ್ಣನಾತ್ಮಕ ಮಾತುಗಳು ಕಾಂಗ್ರೆಸ್ ಚಾವಡಿಯಲ್ಲಿ ಕೇಳಿಬರುತ್ತಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಲ್ಲಿ ಮುಗ್ಗರಿಸಿದ್ದರೂ ಬಾದಾಮಿ ಕ್ಷೇತ್ರದಲ್ಲಿ 1696 ಮತಗಳ ತೀರಾ ತೆಳು ಅಂತರದಲ್ಲಿ ಗೆದ್ದು ರಾಜಕೀಯವಾಗಿ ತಮ್ಮ ನೆಲೆ ಉಳಿಸಿಕೊಂಡಿದ್ದರು. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಅವರು ಮುಂದುವರಿಯುವ ಬಗ್ಗೆ ಅಸಮಾಧಾನ ಹೊಗೆಯಾಡಲು ಆರಂಭವಾಗಿದೆ.

ಆ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸುತ್ತಿದ್ದ ಬಿ.ಬಿ.ಚಿಮ್ಮನಕಟ್ಟಿ ಬಹಿರಂಗ ವೇದಿಕೆಯಲ್ಲೇ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ನೀವು ಬೇರೆ ಕ್ಷೇತ್ರ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯರನ್ನು ಕೋರಿದ್ದಾರೆ. ಜತೆಗೆ ಅವರಾಡಿದ ಬೇಸರದ ಮಾತುಗಳು ಈಗ ಕಾಂಗ್ರೆಸ್ ಪಾಳಯಕ್ಕೆ ಕಸಿವಿಸಿ ತಂದಿದೆ.

ಈ ಬೆಳವಣಿಗೆ ಬೆನ್ನಲ್ಲೇ ಸಿದ್ದರಾಮಯ್ಯ ಆಪ್ತ ಶಾಸಕರು ಮತ್ತು ಮುಖಂಡರು ಪೈಪೋಟಿಗೆ ಬಿದ್ದವರಂತೆ ಮುಂದಿನ ಚುನಾವಣೆಯಲ್ಲಿ ತಮ್ಮ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿಕೆ ಕೊಡಲಾರಂಭಿಸಿದ್ದಾರೆ. ಸಿದ್ದರಾಮಯ್ಯ ಕೂಡ ತಮಗೆ ಏಳು ಕ್ಷೇತ್ರದಿಂದ ಆಹ್ವಾನ ಇದೆ ಎಂದು ಹೇಳಿಕೊಂಡಿದ್ದಾರೆ. ಇದು ಕಾಂಗ್ರೆಸ್ ಒಳಗಿನ ಬಿಸಿಬಿಸಿ ಚರ್ಚಾ ವಿಷಯವಾಗಿದೆ. ಇದೇ ವೇಳೆ ಆಹ್ವಾನ ಬಂದಿರುವ ಕ್ಷೇತ್ರಗಳು ಸಿದ್ದರಾಮಯ್ಯ ಪಾಲಿಗೆ ಎಷ್ಟು ಸೇಫ್ ಎಂಬ ಚರ್ಚೆಯೂ ಶುರುವಾಗಿದೆ. ಚಾಮರಾಜನಗರ, ಬಳ್ಳಾರಿ ಗ್ರಾಮಾಂತರ, ಹೊಸಪೇಟೆ, ಕೊಪ್ಪಳದಿಂದ ಆಹ್ವಾನ ಬಂದಿದ್ದು, ಚಾಮರಾಜಪೇಟೆ, ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದಲೂ ಬೇಡಿಕೆ ಇದೆ.

ಬಾದಾಮಿಯಲ್ಲಿ ಮುಂದುವರಿಯುವುದು ಇನ್ನು ಕಷ್ಟ ಸಾಧ್ಯ ಬೇರೆ ಕ್ಷೇತ್ರ ನೋಡಿಕೊಳ್ಳಲೇ ಬೇಕಾಗಬಹುದು. ಬಲದವಾದ ವಾದವಿದೆ. ತಮ್ಮದೇ ಸಮುದಾಯದ ನಾಯಕನಿಗೆ ಸಿದ್ದರಾಮಯ್ಯ ನೆಲೆ ಕಲ್ಪಿಸಲಿಲ್ಲ ಎಂಬ ಅಪವಾದ ಅಂಟಿಕೊಂಡರೆ ಚುನಾವಣೆಯಲ್ಲಿ ಕಷ್ಟವಾಗಬಹುದು. ಜತೆಗೆ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿಗೆ ಶ್ರಮಹಾಕಿದ್ದ ಎಸ್.ಆರ್.ಪಾಟೀಲ್​ಗೆ ಈ ಬಾರಿ ಪರಿಷತ್ ಚುನಾವಣೆ ಕೈ ತಪ್ಪಿದೆ. ಇದೂ ಖಂಡಿತ ಪರಿಣಾಮವಾಗಬಹುದು ಎಂದು ಕೈ ನಾಯಕರೇ ಹೇಳುತ್ತಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್​ಗೆ ಬರುವುದು ನಿಚ್ಚಳವಾದರೂ ತಾವು ಪ್ರತಿನಿಧಿಸುತ್ತಿರುವ ಮತ್ತು ತಮಗೆ 1.21 ಲಕ್ಷ ಮತ ನೀಡಿದ ಚಾಮುಂಡೇಶ್ವರಿ ಕ್ಷೇತ್ರವನ್ನು ಅವರು ಸಿದ್ದರಾಮಯ್ಯಗೆ ಬಿಟ್ಟುಕೊಡುತ್ತಾರೆಯೇ ಎಂಬುದು ಕುತೂಹಲದ ಸಂಗತಿ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಆರಿಸಿ ಬಂದಿದ್ದು, ಅವರು ಪುನರಾಯ್ಕೆಗೆ ವರುಣ ಬಿಟ್ಟು ಬೇರೆ ಕ್ಷೇತ್ರ ಕಾಣಿಸುತ್ತಿಲ್ಲ. ಹೊಸಪೇಟೆ ಕ್ಷೇತ್ರವು ಆನಂದ್ ಸಿಂಗ್ ಹಿಡಿತದಲ್ಲಿದೆ ಎಂಬುದು ಸಾಬೀತಾಗಿದೆ. ಜತೆಗೆ ಪ್ರತ್ಯೇಕ ಜಿಲ್ಲೆ ರಚನೆ ಬಳಿಕ ಅವರ ವರ್ಚಸ್ಸು ಮತ್ತಷ್ಟು ವೃದ್ಧಿಯಾಗಿದೆ. ಹೀಗಾಗಿ ಅದು ಸಿದ್ದರಾಮಯ್ಯ ಪಾಲಿಗಂತೂ ಸೇಫ್ ಅಲ್ಲ ಎಂಬ ವಾದವಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಹೆಚ್ಚು ನಂಬಿಕೊಳ್ಳುವಂತಿಲ್ಲ. ಶ್ರೀರಾಮುಲು, ರೆಡ್ಡಿ ಸಹೋದರರ ನೆಲೆದಲ್ಲಿ ಹೋರಾಟ ಮಾಡಬಹುದು ಚುನಾವಣೆಯಲ್ಲಿ ಸೆಣಸುವುದು ಅಷ್ಟು ಸಲೀಸಲ್ಲ ಎಂಬುದು ಅವರು ಅರಿಯದ ವಿಚಾರವೇನಲ್ಲ. ಚಾಮರಾಜನಗರದಿಂದ ಕರೆ ಬಂದಿದ್ದರೂ ಜಾತಿ ಲೆಕ್ಕಾಚಾರದಲ್ಲಿ ನೋಡಿದಾಗ ಅದು ಒಗ್ಗದೇ ಹೋಗಬಹುದು. 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಪಕ್ಷದೊಳಗಿನ ಎದುರಾಳಿಗಳಿರಲಿಲ್ಲ. ಆದರೆ, 2018ರ ಚುನಾವಣೆ ಹೊತ್ತಿಗೆ ಅಂತರಿಕ ಎದುರಾಳಿಗಳ ಪರಿಚಯವಾಗಿತ್ತು. 2023ರ ಚುನಾವಣೆಯಷ್ಟರಲ್ಲಿ ಸಹಜವಾಗಿ ಪ್ರತಿಸ್ಪರ್ಧಿಯ ಬೆಳವಣಿಗೆ ಇನ್ನಷ್ಟು ಹೆಚ್ಚಾಗಿರುತ್ತದೆ ಮತ್ತು ಗುಂಪು ಬಲಿಷ್ಠವಾಗಿರುತ್ತದೆ. ಇದೇ ಕಾರಣಕ್ಕೆ ಸೇಫ್ ಕ್ಷೇತ್ರದ ಕುರಿತು ಸಿದ್ದರಾಮಯ್ಯ ಆಪ್ತರು ಪದೇಪದೆ ಪ್ರಸ್ತಾಪ ಮಾಡಿಕೊಂಡು ಬರುತ್ತಿದ್ದಾರೆ.

ಚಾಮರಾಜಪೇಟೆ ಕೊಪ್ಪಳ ಸೇಫ್!: ಕೊನೆಯದಾಗಿ ಸಿದ್ದರಾಮಯ್ಯ ಅವರ ಮುಂದೆ ಚಾಮರಾಜಪೇಟೆ ಮತ್ತು ಕೊಪ್ಪಳ ಕ್ಷೇತ್ರ ಮಾತ್ರ ಸೇಫ್ ಎನಿಸಿದಂತೆ ತೋರುತ್ತಿದೆ. ಕಾಂಗ್ರೆಸ್ ಮುಖಂಡರೂ ಅದೇ ಅಭಿಪ್ರಾಯಪಡುತ್ತಾರೆ. ಅವರ ಪರಮಾಪ್ತ ಜಮೀರ್ ಅಹ್ಮದ್ ಮತ್ತು ಅಲ್ಪಸಂಖ್ಯಾತ ಮತ ಹೇರಳವಾಗಿರುವ ಕಾರಣ ಚಾಮರಾಜಪೇಟೆ ಕ್ಷೇತ್ರ ನಂಬಿಕೊಳ್ಳಬಹುದು ಜತೆಗೆ ಬಾದಾಮಿ ಕ್ಷೇತ್ರದಂತೆಯೇ ಜಾತಿ ಸಮೀಕರಣದ ಹೋಲಿಕೆ ಇರುವ ಕೊಪ್ಪಳ ಕ್ಷೇತ್ರ ನೆಚ್ಚಿಕೊಳ್ಳಬಹುದೆಂಬ ವಾದ ಕಾಂಗ್ರೆಸ್​ನಲ್ಲಿದೆ.

2000 ಸ್ಥಳಗಳಲ್ಲಿ ಕೈ ಸದಸ್ಯತ್ವ ಅಭಿಯಾನ

ಬೆಂಗಳೂರು: ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಶನಿವಾರ ವಿದ್ಯುಕ್ತ ಚಾಲನೆ ದೊರೆತಿದ್ದು, ರಾಜ್ಯದ ಎರಡು ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸದಸ್ಯತ್ವ ನೋಂದಣಿ ಮಾಡಿಕೊಂಡರು. ಇದೇ ವೇಳೆ ವಿಡಿಯೋ ಸಂವಾದ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸದಸ್ಯತ್ವದ ಮಹತ್ವ ಮತ್ತು ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸದಸ್ಯತ್ವ ಅಭಿಯಾನ ಕುರಿತು ಸಂದೇಶ ನೀಡಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್ ಸೇರಿ ಎಲ್ಲ ಪ್ರಮುಖ ನಾಯಕರು ತಂತಮ್ಮ ಬೂತ್​ಗಳಿಂದ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಮಾಹಿತಿ ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಶಾಸಕ ವಿ.ಮುನಿಯಪ್ಪ, ಕೆಪಿಸಿಸಿ ಸದಸ್ಯತ್ವ ನೋಂದಣಿ ಅಭಿಯಾನ ಸಮಿತಿ ಸಂಚಾಲಕ ಆರ್.ವಿ.ವೆಂಕಟೇಶ್, ಡಿಜಿಟಲ್ ಸದಸ್ಯತ್ವ ನೋಂದಣಿ ವಿಭಾಗದ ಸಂಚಾಲಕ ರಘುನಂದನ್ ರಾಮಣ್ಣ, ಎಐಸಿಸಿ ಮಾಜಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯದ ಮೂಲೆ, ಮೂಲೆಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಕಡೆಗಳಿಂದ ಬ್ಲಾಕ್ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿದರು. ಈ ಎಲ್ಲರೂ ಜೂಮ್ ಮೂಲಕ ಒಂದೇ ವೇದಿಕೆಗೆ ಸಂಪರ್ಕ ಪಡೆದಿದ್ದರು. ಈ ಅಭಿಯಾನದ ನಂತರ ಬ್ಲಾಕ್, ಜಿಲ್ಲಾ ಹಾಗೂ ಕೆಪಿಸಿಸಿ ಚುನಾವಣೆ ನಡೆಯಬಹುದು. ಪಕ್ಷದ ಸದಸ್ಯತ್ವ ಪಡೆದ ನಂತರ ಸಕ್ರಿಯ ಸದಸ್ಯರಾದವರು ಈ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ನಮಗೆ ಸಂಖ್ಯೆ ಕಡಿಮೆ ಇದ್ದರೂ ಪರವಾಗಿಲ್ಲ, ಬೋಗಸ್ ಸದಸ್ಯತ್ವ ಮಾತ್ರ ಬೇಡ ಎಂದು ಡಿ.ಕೆ.ಶಿವಕುಮಾರ್ ಕರೆಕೊಟ್ಟರು.

ಅಭಿಯಾನದ ವಿಶೇಷ

  • ಸಕ್ರಿಯ ಸದಸ್ಯತ್ವ ಪಡೆಯುವವರು ಕನಿಷ್ಠ 25 ಸದಸ್ಯತ್ವ ಮಾಡಿಸಬೇಕು. ಸಕ್ರಿಯ ಸದಸ್ಯರಿಗೆ ಮಾತ್ರ ವಿವಿಧ ಹಂತಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇರಲಿದೆ. ಸದಸ್ಯರಾಗದೆ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ.
  • ಪ್ರತಿ ಬೂತ್​ಗೆ ಡಿಜಿಟಲ್ ಯೂತ್ ಎಂದು ಗುರುತಿಸಿದ್ದು, ಅವರ ದೂರವಾಣಿ ಸಂಖ್ಯೆಯನ್ನು ಎಐಸಿಸಿಗೆ ನೀಡಲಿದ್ದು, ಅವರಿಗೆ ಆಪ್ ತೆರೆಯಲು ಅವಕಾಶ ನೀಡಲಾಗುತ್ತದೆ. ನಂತರ ಅವರು ಡಿಜಿಟಲ್ ಸದಸ್ಯತ್ವ ಮಾಡಿಸುವ ಅವಕಾಶ ಪಡೆಯಲಿದ್ದಾರೆ.
  • ಈ ಅಭಿಯಾನದಲ್ಲಿ ಭಾಗವಹಿಸುವವರು 1 ನಿಮಿಷದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬೇಕು. ದಾಖಲೆ ದೃಷ್ಟಿಯಿಂದ ಇದು ಅಗತ್ಯ.

ಇಬ್ರಾಹಿಂ-ಡಿ.ಕೆ.ಶಿವಕುಮಾರ್ ಭೇಟಿ: ಜೆಡಿಎಸ್ ಸಂಪರ್ಕದಲ್ಲಿರುವ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದರು. ಈ ಭೇಟಿ ಕುರಿತು ವಿವರಣೆ ನೀಡಿದ ಡಿಕೆಶಿ, ಇಬ್ರಾಹಿಂ ಸದಸ್ಯತ್ವ ಪಡೆಯಲು ಆಗಮಿಸಿದ್ದರು. ಆದರೆ ಗುರುತಿನ ಚೀಟಿ ಇಲ್ಲದ ಕಾರಣ ತಮ್ಮ ಬೂತ್​ನಲ್ಲೇ ಸದಸ್ಯತ್ವ ಪಡೆಯುತ್ತಾರೆ. ಜತೆಗೆ ಪಕ್ಷದ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲು ಆಗಮಿಸಿದ್ದರು ಎಂದರು. ಮುಂದಿನ ಮುಖ್ಯಮಂತ್ರಿ ವಿಷಯದಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಅವರ ಹೇಳಿಕೆ ನೋಡಿಲ್ಲ. ಯಾರಿಗೆ ಏನೆಲ್ಲ ಆಸೆ ಇದೆಯೋ ಅದನ್ನು ಎಐಸಿಸಿ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ನಾನು ಬಿಟ್ಟಮೇಲೆ ಜೆಡಿಎಸ್ ಸೊರಗುತ್ತಿದೆ

ಮೈಸೂರು: ಬಡವ, ಬಲ್ಲಿದ, ದಲಿತ, ಹಿಂದುಳಿದವ ಹೀಗೆ ಎಲ್ಲರೂ ಬೆಳೆದಾಗ ದೇಶ ಅಭಿವೃದ್ಧಿಯತ್ತ ಸಾಗಲಿದ್ದು, ಸಮಾಜಮುಖಿ ಸಿದ್ಧಾಂತ ಹೊಂದಿರುವ ಕಾಂಗ್ರೆಸ್​ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಸಿದ್ದರಾಮನ ಹುಂಡಿಯಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ಎಲ್ಲ ಜಾತಿ ಮತ್ತು ಧರ್ಮದವರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯೋದು ಹೆಮ್ಮೆಯ ಸಂಗತಿಯಾಗಿದ್ದು, ಎಲ್ಲರೂ ಪಕ್ಷದ ಸದಸ್ಯತ್ವ ಪಡೆಯಬೇಕು ಎಂದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರಿಗೆ ಯಾವುದೇ ಸಿದ್ಧಾಂತ ಇಲ್ಲ. ಅವರದು ಅನುಕೂಲಕರ ರಾಜಕಾರಣವಾಗಿದೆ. ಬಿಜೆಪಿಯ ಕೆಲ ಮುಖಂಡರು ಸಂವಿಧಾನ ಬದಲಾಯಿಸುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸದಿದ್ದರೆ ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ನಾನು ಕೂಡ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದರು. ಬಿಜೆಪಿಯಲ್ಲಿ ಮುಸ್ಲಿಂ ಧರ್ಮದ ಒಬ್ಬ ಎಂಎಲ್​ಎನೂ ಇಲ್ಲ. ಮುಸ್ಲಿಂ ಜನರು ಕೂಡ ನಮ್ಮ ದೇಶದ ಪ್ರಜೆಗಳಾಗಿದ್ದಾರೆ. ಈ ಬಗ್ಗೆ ಮಾತನಾಡಿದರೆ ಸಿದ್ದರಾಮಯ್ಯ ಹಿಂದು ವಿರೋಧಿ ಎನ್ನುತ್ತಾರೆ. ನಾನು ಹಿಂದು ಅಲ್ಲವಾ?, ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಹೋಗಲ್ವಾ? ಎಂದು ಪ್ರಶ್ನಿಸಿದ ಅವರು, ನಾನು ನನ್ನ ಧರ್ಮದ ಜತೆ ಎಲ್ಲ ಧರ್ಮವನ್ನು ಗೌರವಿಸು ತ್ತೇನೆ ಎಂದರು. ಜೆಡಿಎಸ್ ಕೇವಲ 4 ರಿಂದ 5 ಜಿಲ್ಲೆಯಲ್ಲಿ ಇದೆ. ಆದರೂ 2023ರಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಜೆಡಿಎಸ್​ನಲ್ಲಿ ಇದ್ದಾಗ 59 ಎಂಎಲ್​ಎಗಳು ಗೆದ್ದಿದ್ದರು. ಬಳಿಕ ಆ ಪಕ್ಷ ಪ್ರತಿ ಬಾರಿ ಚುನಾವಣೆಯಲ್ಲಿ ಕೆಳಗೆ ಇಳಿಯುತ್ತಿದೆಯೇ ಹೊರತು ಮೇಲೆ ಏರುತ್ತಿಲ್ಲ. ಅವರಿಗೆ ಸಿದ್ಧಾಂತ ಇಲ್ಲ. ಯಾರ ಜತೆ ಹೋಗಬೇಕು ಎನ್ನುವುದು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net