

ಮಂಡ್ಯ: ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಹುಡುಗಾಟ ಬಿಡಬೇಕು. ಜತೆಗೆ ರೈತರಿಗೆ ಬೆಳೆ ಬೆಳೆಯಬೇಡಿ, ಪರಿಹಾರ ಕೊಡುತ್ತೇವೆಂದು 6ನೇ ಗ್ಯಾರಂಟಿ ಘೋಷಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ತ.ನಾಡಿಗೆ ನೀರು ಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ನಿರ್ವಹಣಾ ಪ್ರಾಧಿಕಾರದವರು ಹೇಳಿದ ತಕ್ಷಣ ಸರ್ಕಾರ ಬಿಡುಗಡೆ ಮಾಡಿದೆ. ಅಂದು ಸರ್ಕಾರ ಪ್ರತಿಭಟನೆ ಮಾಡಬೇಕಿತ್ತೇ ಹೊರತು ನೀರು ಬಿಡಬಾರದಿತ್ತು. ತ.ನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಅದರ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕಿತ್ತು. ಬಳಿಕ ನ್ಯಾಯಾಲಯದ ತೀರ್ಮಾನಕ್ಕೆ ನಾವು ಬದ್ದರಾಗಬೇಕಿತ್ತು ಎಂದರು.
ಜನ ಹಿತರಕ್ಷಣೆಗೆ ಒಳ್ಳೆಯ ಕೆಲಸ ಮಾಡಿ ನಾವು ಬೆಂಬಲ ಕೊಡುತ್ತೇವೆಂದು ಹೇಳಿದ್ದೀನಿ. ಆದ್ದರಿಂದ ರಾಜ್ಯ ಸರ್ಕಾರ ಹುಡುಗಾಟ ಬಿಡಬೇಕು. ಮಂಡ್ಯ ಜಿಲ್ಲೆಯ ರೈತರು ಪ್ರತಿಭಟನೆ ಮಾಡಿದರು. ಆದರೆ ರೈತರನ್ನು ಸುಪ್ರೀಂ ಕೋರ್ಟ್‌ಗೆ ಹೋಗಿ ಎಂದು ಸಚಿವರು ಹೇಳಿದರು. ಹಾಗಿದ್ದರೆ ಇವರಿಗೆ ಪೇಪರ್, ಪೆನ್ ಕೊಟ್ಟಿದ್ದೇಕೆ?. ರಕ್ಷಣೆ ಮಾಡಲೆಂದು ಅಧಿಕಾರ ಕೊಟ್ಟಿದ್ದಾರೆ. ಆದ್ದರಿಂದ ನೀರಾವರಿ ಮಂತ್ರಿ ಹೇಳಿಕೆಯನ್ನು ಕೊಡುವುದು ಬಿಟ್ಟು ಸರಿಯಾದ ಕೆಲಸ ಮಾಡಬೇಕು. ರೈತರಿಗೆ ಬೆಳೆ ಹಾಕಬೇಡಿ, ಪರಿಹಾರ ಕೊಡುತ್ತೇವೆಂದು ಘೋಷಣೆ ಮಾಡಿ. ಸಾಲ ಮಾಡಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪುತ್ತದೆ ಎಂದು ಹೇಳಿದರು.
ಕೆಲವರು ರಾಜಕೀಯವಾಗಿ ಮಾತನಾಡುತ್ತಾರೆ. ಈ ಹಿಂದೆ ತ.ನಾಡಿಗೆ ಹಲವಾರು ಸಂದರ್ಭದಲ್ಲಿ ನೀರು ಕೊಟ್ಟಿದ್ದೇವೆ. ಇಂತಹ ಪರಿಸ್ಥಿತಿ ಇದ್ದಾಗ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ನುರಿತ ತಜ್ಞರ ಜತೆ ಚರ್ಚಿಸಿ ನಿರ್ಧಾರ ಮಾಡಬೇಕು. ಇದು ಸೂಕ್ಷ್ಮವಾದ ವಿಚಾರ ಇದು. ಕಾವೇರಿ ನದಿ ನೀರು ವಿಚಾರದಲ್ಲಿ ನಾನು ಮುಖ್ಯಮಂತ್ರಿ ಇದ್ದಾಗಲೇ ಟ್ರಿಬ್ಯುನಲ್‌ಗೆ ವರದಿ ಕೊಟ್ಟಿದ್ದೇವೆ. ದೇವೇಗೌಡರ ಸಲಹೆ ಮೇರೆಗೆ ಕೋರ್ಟ್‌ಗೆ ಹೋಗಿ ಹೋರಾಟದ ಫಲ 15 ಟಿ.ಎಂ.ಸಿ ನೀರು ಕರ್ನಾಟಕಕ್ಕೆ ಸಿಕ್ಕಿದೆ. ಅದು ದೇವೆಗೌಡರ ಹೋರಾಟ ಪ್ರತಿಫಲ ಎಂದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಶ್ರೀ ಸಾಯಿ ಎಲೆಕ್ಟ್ರಾನಿಕ್ಸ್ ಮಾಲೀಕ ಸ್ವಾಮಿ ಇತರರಿದ್ದರು.