ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋದವನಲ್ಲ

HDK
Published on

ಅನೇಕ ಜನಪ್ರಿಯ ಯೋಜನೆಗಳ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಹಲವು ರಾಜಕೀಯ ಸ್ಥಿತ್ಯಂತರಗಳ ಕಾರಣದಿಂದ ಅಧಿಕಾರ ಕಳೆದುಕೊಂಡು ಒಂದು ವರ್ಷವಾಗುತ್ತಿದೆ (ಜುಲೈ 23). ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಜಟಿಲ ಪರಿಸ್ಥಿತಿಗಳನ್ನು ಎದುರಿಸಿಯೂ 14 ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿ ಹಲವು ನೋವು ಸಹಿಸಿಕೊಂಡು ಆಡಳಿತ ನಡೆಸಿದ್ದರು. ಈ ಅವಧಿಯಲ್ಲಿ ಅನುಭವಿಸಿದ ಸಂಕಷ್ಟಗಳು, ಈಗಿನ ಸರ್ಕಾರ ಸಾಗುತ್ತಿರುವ ದಿಕ್ಕಿನ ಬಗ್ಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

| ವಿಲಾಸ ಮೇಲಗಿರಿ ಬೆಂಗಳೂರು # ನಿಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಅಭದ್ರತೆಯೇ ಚರ್ಚೆಯ ವಸ್ತುವಾಗಿತ್ತಲ್ಲವೆ?

ಸರ್ಕಾರ ಈಗ ಹೋಯಿತು, ಆಗ ಹೋಯಿತು ಎಂಬ ಅಪಪ್ರಚಾರ ನಡೆಯಿತು. ನನ್ನ ಟೈಮ್ ಇಷ್ಟೆ ಎಂದು ಸಾರ್ವಜನಿಕವಾಗಿ ಚರ್ಚೆಯಾದಾಗ ಹೇಗೆ ಕೆಲಸ ಮಾಡಲು ಸಾಧ್ಯ ಎಂಬುದನ್ನು ಜನ ಯೋಚಿಸಬೇಕು. ನನ್ನ ಅಧಿಕಾರಾವಧಿಯಲ್ಲಿ ಜನತೆಗೆ ದ್ರೋಹ ಮಾಡದೆ ಹಲವಾರು ಉತ್ತಮ ಕಾರ್ಯಕ್ರಮ ಮಾಡಿದ ತೃಪ್ತಿ ನನಗಿದೆ.

# ನೀವು ವಿಷಕಂಠನಾದೆ ಎಂದಿದ್ದೇಕೆ?

ನಾನು ಅಧಿಕಾರ ಸ್ವೀಕರಿಸುವ ವೇಳೆಗಾಗಲೇ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದರು. ಹೊಸ ಬಜೆಟ್ ಎಂದು ಚರ್ಚೆ ನಡೆಯಿತು. ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಸಾಲ ಮನ್ನಾ ಯೋಜನೆ ಜಾರಿಗೊಳ್ಳುವುದು ಕೊಂಚ ತಡವಾಗಿದ್ದರಿಂದ ನಾನು ರೈತರಿಗೆ ಮೋಸ ಮಾಡುತ್ತಿದ್ದೇನೆಂದು ಬಿಜೆಪಿ ಅಪಪ್ರಚಾರ ನಡೆಸಿತು. ಆ ಎಲ್ಲ ನೋವನ್ನೂ ನಾನು ವಿಷಕಂಠನಂತೆ ನುಂಗಿಕೊಂಡೆ.

# ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಹಕಾರ ಹೇಗಿತ್ತು?

ನಾನಂತೂ ಅಧಿಕಾರ ಬಯಸಿ ಯಾರ ಮನೆ ಬಾಗಿಲಿಗೂ ಹೋದವನಲ್ಲ. ಬೇಷರತ್ ಬೆಂಬಲ ಎಂದ ಕಾಂಗ್ರೆಸ್ ಅದೇ ರೀತಿ ನಡೆದುಕೊಂಡಿತೆ ಎಂಬುದನ್ನು ಪ್ರಶ್ನಿಸಿಕೊಳ್ಳಲಿ. ಸರ್ಕಾರ ಮಾಡುವುದಕ್ಕೆ ಅವರ ಹೈಕಮಾಂಡ್ ಮುಂದಾದರೆ, ಇಲ್ಲಿ ಕೆಲವರು ಜೆಡಿಎಸ್ ವಿಭಜಿಸುವ ಸಂಚು ರೂಪಿಸಿದ್ದರು. ಈಗ ಜೆಡಿಎಸ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ.

# ನಿಮ್ಮ ನಿರೀಕ್ಷೆಗೆ ತಕ್ಕಂತೆ ರೈತರ ಸಾಲ ಮನ್ನಾ ಆಯಿತೆ?

ರೈತರ ಸಾಲ ಮನ್ನಾಕ್ಕೆ 25 ಸಾವಿರ ಕೋಟಿ ರೂ. ಇಟ್ಟಿದ್ದೆ. ಅದು ಸಂಪೂರ್ಣ ಸದ್ಬಳಕೆ ಆಗಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ರೈತರ ಸಾಲ ಮನ್ನಾಕ್ಕೆ ಇಟ್ಟ 1,800 ಕೋಟಿ ರೂ. ಕೂಡ ಸರಿಯಾಗಿ ವಿಲೇವಾರಿ ಆಗಲಿಲ್ಲ. ಹಲವಾರು ಬ್ಯಾಂಕ್​ಗಳು ರೈತರನ್ನು ದಾರಿ ತಪ್ಪಿಸಿದವು. ಕೊನೆಗೆ ಈ ಸ್ಕೀಮ್ ನಿಲ್ಲಿಸಿದ್ದಾರೆ. ಇದು ಬಿಜೆಪಿ ರೈತರಿಗೆ ಕೊಟ್ಟ ಕೊಡುಗೆ.

# ಬಿಜೆಪಿ ಸರ್ಕಾರದ ಬಗ್ಗೆ ಮೃಧು ಧೋರಣೆ ಅನುಸರಿಸುತ್ತಿದ್ದಾರೆಂಬ ಆರೋಪ ಇದೆಯಲ್ಲ?

ಬಿಜೆಪಿ ಆಡಳಿತದ ಬಗ್ಗೆ ನಾನು ತಾಳ್ಮೆಗೆಟ್ಟು ಎಲ್ಲೂ ಮಾತನಾಡಿಲ್ಲ. ಮೌನದಿಂದ ಬಿಜೆಪಿ ಆಡಳಿತ ಗಮನಿಸಿಕೊಂಡು ಬಂದಿದ್ದೇನೆ. ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಆಕ್ರೋಶವಿರಬಹುದು. ಈ ಇಳಿವಯಸ್ಸಿನಲ್ಲಿ ಶ್ರಮಪಟ್ಟು ಸಿಎಂ ಆಗಿ ಆಡಳಿತ ನಡೆಸುತ್ತಿರುವ ಬಗ್ಗೆ ನನಗೆ ಎಲ್ಲೋ ಒಂದು ಕಡೆ ಅನುಕಂಪವಿದೆ.

# ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಬಗ್ಗೆ ನಿಮ್ಮ ನಿಲುವೇನು?

ನಾನು 14 ತಿಂಗಳು ಅಸಮರ್ಥ ಸರ್ಕಾರ ಕೊಟ್ಟೆ ಎಂಬ ಆರೋಪ ಮಾಡಿದವರು ಈ ಒಂದು ವರ್ಷದಲ್ಲಿ ಎಷ್ಟು ಸಮರ್ಥ ಸರ್ಕಾರ ಕೊಟ್ಟಿದ್ದಾರೆ? ಕರೊನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕು ನಿಯಂತ್ರಣ ವಿಚಾರದಲ್ಲಿ ನನ್ನ ಸಲಹೆಯನ್ನೂ ಸರ್ಕಾರ ಸ್ವೀಕರಿಸಲಿಲ್ಲ. ಪ್ರತಿಪಕ್ಷದ ನಾಯಕರ ಮಾತನ್ನೂ ಕೇಳಲಿಲ್ಲ. ಸಿಎಂ ಮತ್ತು ಮಂತ್ರಿಗಳು ದಿನಕ್ಕೊಂದು ತೀರ್ಮಾನ ತೆಗೆದುಕೊಳ್ಳುತ್ತಿದ್ದು, ಜನರಲ್ಲಿ ಅನುಮಾನ ಉಂಟಾಗಲು ಕಾರಣವಾಗಿವೆ.

# ಕೋವಿಡ್ ಉಪಕರಣ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬರುತ್ತಿದೆ..?

ಪ್ರತಿಪಕ್ಷ ನಾಯಕರು ಕೋವಿಡ್​ನಲ್ಲಿ 2 ಸಾವಿರ ಕೋಟಿ ರೂ.ಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿದ್ದಾರೆ. ಅವ್ಯವಹಾರ ಆರೋಪ ಕೇಳಿಬಂದಾಗ ಯಾವ ಯಾವ ಬಾಬ್ತಿಗೆ ಎಷ್ಟು ಹಣ ಕೊಟ್ಟಿದ್ದೇವೆ ಎಂಬುದನ್ನು ಜನರ ಮುಂದಿಡಲು ಏನು ಕಷ್ಟ.

ರೈತರ ಸಾಲ ಮನ್ನಾ ಮಾಡಲೆಂದೇ ಸರ್ಕಾರದಲ್ಲಿದ್ದೆ...

ಮೈತ್ರಿ ಸರ್ಕಾರದಲ್ಲಿ 14 ತಿಂಗಳು ನಾನು ಮುಂದುವರಿದಿದ್ದರೆ, ಅದು ರೈತರ ಸಾಲ ಮನ್ನಾ ಮಾಡುವ ಏಕೈಕ ಉದ್ದೇಶದಿಂದ. ರೈತರ ಸಾಲ ಮನ್ನಾ ಬಗ್ಗೆ ಅನೇಕರು ಲಘುವಾಗಿ ಮಾತನಾಡಿದ್ದರು. ಸಮ್ಮಿಶ್ರ ಸರ್ಕಾರದ ಎಲ್ಲ ನೋವು ನುಂಗಿಕೊಂಡು ಸಾಲ ಮನ್ನಾದಲ್ಲಿ ಯಶಸ್ಸು ಕಾಣಲೇಬೇಕು ಎಂಬ ಹಠದಿಂದ ಸರ್ಕಾರದಲ್ಲಿದ್ದೆ. ರೈತರ ಸಾಲ ಮನ್ನಾ ತೃಪ್ತಿ ತಂದ ವಿಚಾರ.

ಇಂದು ಜೂಮ್​ನಲ್ಲಿ ಸಂವಾದ

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚುತ್ತಿರುವುದರಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತರ ಜತೆ ಜೆ.ಪಿ.ನಗರದ ತಮ್ಮ ನಿವಾಸದಿಂದ ಬುಧವಾರ ಬೆಳಗ್ಗೆ 11.30ಕ್ಕೆ ಜೂಮ್ ಆಪ್​ನಲ್ಲಿ ಸಂವಾದ ನಡೆಸಲಿದ್ದಾರೆ. ಕುಮಾರಸ್ವಾಮಿ ಸಿಎಂ ಸ್ಥಾನದಿಂದ ಕೆಳಗಿಳಿದು ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೋ ಸಂವಾದ ಮಹತ್ವ ಪಡೆದುಕೊಳ್ಳಲಿದೆ. ಕರೊನಾ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಸೋಂಕಿತರಿಗೆ ಸಿಗುತ್ತಿರುವ ಸೌಲಭ್ಯ, ಜನರು ಅನುಭವಿಸುತ್ತಿರುವ ಸಂಕಷ್ಟ, ಪಕ್ಷದ ಮುಖಂಡರು, ಕಾರ್ಯಕರ್ತರು ನೀಡಿರುವ ನೆರವಿನ ಹಸ್ತ, ಸರ್ಕಾರದ ವಿರುದ್ಧ ಸಂಘಟಿಸಬೇಕಾಗಿರುವ ಹೋರಾಟ, ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಮತ್ತಿತರ ವಿಚಾರಗಳ ಕುರಿತೂ ರ್ಚಚಿಸಲಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಸೇರಿ ವಿವಿಧ ಜಿಲ್ಲೆಗಳ ಕಾರ್ಯಕರ್ತರ ಜತೆ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net