ಅಭಿವೃದ್ಧಿ ಮಾಡಿ ಋಣ ತೀರಿಸುವೆ: ಎಚ್​ಡಿಕೆ ಭರವಸೆ

ex cm hdk photo
Published on

ಚನ್ನಪಟ್ಟಣ: ತಾಲೂಕಿನ ಸಮಗ್ರ ಅಭಿವೃದ್ಧಿಯ ಮೂಲಕ ನಿಮ್ಮ ಅಭಿಮಾನದ ಋಣ ತೀರಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಎ.ವಿ. ಹಳ್ಳಿ ರಸ್ತೆ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿ, ನಾನು ಈ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನಿಮ್ಮ ಅಭಿಮಾನ ನನ್ನನ್ನು ಇಲ್ಲಿಂದ ಚುನಾವಣೆಗೆ ನಿಲ್ಲುವಂತೆ ಮಾಡಿತ್ತು. ಪ್ರಚಾರಕ್ಕೆ ಬರದಿದ್ದರೂ ನೀವು ತೋರಿಸಿದ ಪ್ರೀತಿಯನ್ನು ನನ್ನ ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ ಎಂದರು.

ನನಗೆ ಪಕ್ಷಭೇದವಿಲ್ಲ: ತಾಲೂಕಿನ ಜನತೆ ನನಗೆ ಮತ ಕೊಟ್ಟು ಸಿಎಂ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ. ಆದರೆ, ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ. ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದು ನನ್ನ ಕನಸು. ಅಧಿಕಾರ ಇಲ್ಲದಿದ್ದರೂ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಶಕ್ತಿಯಿದೆ. ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಭೇದ ಮಾಡದೆ, ಎಲ್ಲರ ಕಷ್ಟಸುಖಗಳಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.

100 ಕೋಟಿ ಅನುದಾನಕ್ಕೆ ಮನವಿ: ತಾಲೂಕಿನ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ನಾನು ನೀಡಿದ್ದ ಕೆಲ ಅನುದಾನವನ್ನು ಈಗಿನ ಸರ್ಕಾರ ತಡೆಹಿಡಿದಿತ್ತು. ಇದೀಗ, ಅದು ಕೂಡ ಬಿಡುಗಡೆಯಾಗಿದೆ. ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳಿಗೆ 100 ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕಸದ ಸಮಸ್ಯೆಗೆ ಪರಿಹಾರ

ನಗರದ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ. ಸೂಕ್ತ ಜಾಗಕ್ಕಾಗಿ ಈಗಾಗಲೇ ಜಿಲ್ಲಾಡಳಿತ ಹಾಗೂ ಸರ್ಕಾರದೊಂದಿಗೆ ಚರ್ಚೆ ನಡೆದಿದೆ. ಕಸದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಡಲು ನಿರ್ಧರಿಸಿದ್ದೇನೆ. ಈಗಾಗಲೇ ನಗರದಲ್ಲಿ ಕೊಳಚೆ ನಿಮೂಲನಾ ಮಂಡಳಿಯ ವತಿಯಿಂದ 1,400 ಮನೆಗಳನ್ನು ಮಂಜೂರು ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲದಿನಗಳಲ್ಲಿ ಸೂರು ಸಿಗಲಿದೆ ಎಂದು ಎಚ್​ಡಿಕೆ ತಿಳಿಸಿದರು.

ಖಾಸಗಿ ಬಸ್​ನಿಲ್ದಾಣಕ್ಕೆ ಅನುದಾನ

ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ಖಾಸಗಿ ಬಸ್​ನಿಲ್ದಾಣಕ್ಕೆ 58 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿಂದೆ ಮಂಜೂರಾಗಿದ್ದ ಯೋಜನೆಗಳು ಕಾರಣಾಂತರದಿಂದ ಅರ್ಧಕ್ಕೆ ನಿಂತಿವೆ. ಇವುಗಳನ್ನು ಪೂರ್ಣಗೊಳಿಸುವುದು ನನ್ನ ಜವಾಬ್ದಾರಿ ಎಂದು ಕುಮಾರಸ್ವಾಮಿ ತಿಳಿಸಿದರು.

ಮೂರನೇ ದಿನದ ಪ್ರವಾಸ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಮೂರನೇ ದಿನದ ಪ್ರವಾಸ ಅಕ್ಕೂರು ಜಿಪಂ ವ್ಯಾಪ್ತಿಯಲ್ಲಿ ನಡೆಯಿತು. ಈ ವೇಳೆ ಹಲವು ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಮುಖಂಡರಾದ ಹಾಪ್​ಕಾಮ್್ಸ ದೇವರಾಜು, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಂ, ಇ.ತಿ. ಶ್ರೀನಿವಾಸ್, ಅಂಕುಶನಹಳ್ಳಿ ಸುರೇಶ್, ಯೋಗೇಶ್ ಮುಂತಾದವರು ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net