ಮೀಸಲಾತಿ ಬಿಜೆಪಿಗೆ ತಿರುಗುಬಾಣವಾಗಲಿದೆ : ಎಚ್.ಡಿ. ಕುಮಾರಸ್ವಾಮಿ

HDK
Published on

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಲಾಭವೇನು ಆಗುವು ದಿಲ್ಲ, ಮುಂದೆ ಇದು ಅವರಿಗೆ ತಿರುಗು ಬಾಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೋರಾಟವನ್ನು ರಾಜಕೀಯ ಮುಖಂ ಡರೇ ಪ್ರಾರಂಭಿಸಿ ಇದೀಗ ತಮ್ಮ ಕುತ್ತಿಗೆಗೆ ತಂದುಕೊಂಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸುದೀರ್ಘ ವರದಿಯನ್ನು ಎರಡೂ ವರ್ಷದ ಹಿಂದೆಯೇ ನೀಡಿದ್ದರು. ಚುನಾವಣೆಗೆ ಇನ್ನು ಆರು ತಿಂಗಳು ಬಾಕಿ ಇರುವಾಗ ತರಾತುರಿಯಲ್ಲಿ ವರದಿ ಜಾರಿಗೆ ತರುವ ಅವಶ್ಯಕತೆ ಏನಿತ್ತು? ಇದರ ಕ್ರೆಡಿಟ್ ಪಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಆದರೆ, ಇದರಿಂದ ಜನರನ್ನು ಸೆಳೆಯಲು ಸಾಧ್ಯವಿಲ್ಲ. ನಾಯಕ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸುವಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ, ಎಷ್ಟು ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ? ಹಾಗಾಗಿ ಸರ್ಕಾರದ ತೀರ್ಮಾನದಿಂದ ರಾಜಕೀಯ ಲಾಭ ದೊರೆಯುವುದಿಲ್ಲ ಎಂದರು.

ಮೀಸಲಾತಿ ಹೆಚ್ಚಳ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕು, ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಸ್ವಾತಂತ್ರೃ ಬಂದು ಏಳು ದಶಗಳು ಕಳೆದಿವೆ. ಈ ಸುದೀರ್ಘ ಅವಧಿಯಲ್ಲಿ ಯಾವ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಎಂಬುದನ್ನೆಲ್ಲ ಗಮನಿಸಬೇಕಾಗಿತ್ತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net