ನನ್ನ ಟೀಕಿಸುವವರು ವಿಧಾನಸೌಧ ಪ್ರವೇಶಿಸಲಿ

halappa (2)
Published on

ಸಾಗರ: ಕೆಲವರು ಬಂಗಾರಪ್ಪ ಅವರಂತೆ ಕನ್ನಡಕ ಹಾಕಿಕೊಂಡು ಕೈಬೀಸಿ ತಿರುಗುತ್ತಿದ್ದಾರೆ. ಬಂಗಾರಪ್ಪಗೆ ರಾಜಕೀಯ ವರ್ಚಸ್ಸು ಇತ್ತು. ಜತೆಗೆ ವಕೀಲರಾಗಿದ್ದರು. ಅವರ ಗತ್ತು ಯಾರಿಗೂ ಬರುವುದಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೆಸರೇಳದೆ ಶಾಸಕ ಹರತಾಳು ಹಾಲಪ್ಪ ಕುಟುಕಿದರು.

ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರಿಗೆ ನಗರದ ಗಾಂಧಿ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಚುನಾವಣೆಯಲ್ಲಿ ನಾನು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರೆ ಅದನ್ನೂ ಟೀಕಿಸಿದರು. ನನ್ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು ಗ್ರಾಪಂ ಚುನಾವಣೆಗೆ ನಿಂತಾಗ ಅವರ ಪರ ಪ್ರಚಾರ ಮಾಡುವುದು ತಪ್ಪೇ? ಸಾಗರದಲ್ಲಿ ಕಾಂಗ್ರೆಸ್​ನ ಹಲವು ಬಣಗಳಿವೆ. ಈಗ ಟೀಕಿಸುತ್ತಿರುವವರು ಮುಂದೆ ಹೇಗೆ ವಿಧಾನಸೌಧ ಪ್ರವೇಶಿಸುತ್ತಾರೆಂದು ನೋಡುತ್ತೇನೆ ಎಂದು ಸವಾಲೆಸೆದರು.

ದೊಡ್ಡ ಚುನಾವಣೆಗಳನ್ನು ಹೇಗೋ ಗೆದ್ದು ಬಿಡಬಹುದು. ಆದರೆ ಗ್ರಾಪಂ ಚುನಾವಣೆ ಗೆಲ್ಲುವುದು ಕಷ್ಟ. ಪಕ್ಷದ ನೆಲೆಯೇ ಇಲ್ಲದ ಕಡೆ ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿರುವುದು ಪಕ್ಷದ ಸದೃಢತೆಗೆ ಸಾಕ್ಷಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ತಾಲೂಕಿನ 27 ಗ್ರಾಪಂಗಳಲ್ಲಿ 153 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 15 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, 42 ನೂತನ ಗ್ರಾಪಂ ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈಗಾಗಲೇ 15ಕ್ಕೂ ಹೆಚ್ಚು ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದು, ಉಳಿದ 4 ಗ್ರಾಪಂಗಳಲ್ಲಿ ಮೀಸಲಾತಿ ಪ್ರಕಟ ಬಳಿಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಸನಗರ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧ್ಯಕ್ಷರಾಗಲಿದ್ದಾರೆ. ಜಿಲ್ಲೆಯಲ್ಲಿ 2,609 ಗ್ರಾಪಂ ಸದಸ್ಯರ ಪೈಕಿ 2 ಸಾವಿರಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಜಯಗಳಿಸಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ಚೇತನರಾಜ್ ಕಣ್ಣೂರು, ಮಧುರಾ ಶಿವಾನಂದ್, ವಿ.ಮಹೇಶ್, ಸುರೇಶ್ ಸ್ವಾಮಿರಾವ್, ಯು.ಎಚ್.ರಾಮಪ್ಪ, ಕುಪೇಂದ್ರ, ವೀರೇಶ್ ಆಲವಳ್ಳಿ, ಸುವರ್ಣಾ ಟೀಕಪ್ಪ, ಕಲಸೆ ಚಂದ್ರಪ್ಪ, ಸವಿತಾ ನಟರಾಜ್, ವಾಸಂತಿ ರಮೇಶ್, ಪಿ.ಮಂಜುನಾಥ್, ಗೌತಮ್ ಕೆ.ಎಸ್.ಗಣೇಶಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net