ನಗರಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನ ಆಚರಣೆ

1
Published on

ಮೈಸೂರು: ಹಲವಾರು ಹೋರಾಟಗಳನ್ನು ಕಂಡಿರುವ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪ ಶಿಸ್ತಿನ ಸಿಪಾಯಿಯಂತೆ, ದಣಿವರಿಯದ ನಾಯಕನಂತೆ ಪಕ್ಷಕ್ಕೆ ದುಡಿದಿದ್ದಾರೆ. ಮುಖ್ಯಮಂತ್ರಿಯಾಗಿ ನಾಡಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ನಗರಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ನೇತೃತ್ವದಲ್ಲಿ ಗುರುವಾರ ನಿವೇದಿತಾನಗರದ ಎಸ್.ಆರ್.ಸುಬ್ಬರಾವ್ ಉದ್ಯಾನದಲ್ಲಿ ಆಯೋಜಿಸಿದ್ದ ಉಚಿತ ಫುಟ್ ಪಲ್ಸ್ ಥೆರಪಿ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಡಿಯೂರಪ್ಪ ಅವರ ಹೋರಾಟದ ಬದುಕು ನಿಜಕ್ಕೂ ಮಾದರಿ. ಅವರ ಜೀವನ ಎಲ್ಲರಿಗೂ ಪಾಠ. ಯುವ ರಾಜಕಾರಣಿಗಳು ಯಡಿಯೂರಪ್ಪ ಅವರ ಆದರ್ಶಗಳನ್ನು ಅನುಸರಿಸಬೇಕು ಎಂದರು.

ನಗರಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಮಾತನಾಡಿ, ಯಡಿಯೂರಪ್ಪ ಅವರು ಕಾವೇರಿ ಹೋರಾಟದಿಂದ ರಾಮ ಜನ್ಮಭೂಮಿ ಹೋರಾಟದವರೆಗೆ, ಜೀತಮುಕ್ತರ ಸಮಸ್ಯೆಯಿಂದ ಬಗರ್‌ಹುಕುಂ ಸಮಸ್ಯೆವರೆಗೆ ನಿರಂತರ ಹೋರಾಟ ಮಾಡುತ್ತಾ, ರೈತಪರ, ಜನಪರ ಕಾಳಜಿ ಹೊಂದಿರುವ ನಾಯಕರಾಗಿ ಇಂದಿಗೂ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

ರೈತ ಪರ ಹೋರಾಟದ ಮೂಲಕ ರಾಜಕೀಯಕ್ಕೆ ಧುಮುಕಿದ ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ, ಶಿಸ್ತಿನ ಸಿಪಾಯಿ ಎಂದೇ ಕರೆಸಿಕೊಂಡವರು. ಬೂಕನಕೆರೆ ಗ್ರಾಮದ ಬಡರೈತ ಕುಟುಂಬದ ಯಡಿಯೂರಪ್ಪ ದಿಢೀರ್ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೆ ಸ್ವಂತ ಪರಿಶ್ರಮದ ಮೇಲೆ ಹಂತ ಹಂತವಾಗಿ ಬೆಳೆದು ಬಂದ ಧೀಮಂತ ನಾಯಕ ಎಂದರು.

ಯಡಿಯೂರಪ್ಪ ಯಾವುದೇ ಚಳವಳಿಗೆ ಧುಮುಕಿದರೂ ಆಡಳಿತ ಪಕ್ಷ ಥರಗುಟ್ಟುತ್ತದೆ. ಈ ಕಾರಣದಿಂದಾಗಿಯೇ ಯಡಿಯೂರಪ್ಪ ಅವರ ಚಳವಳಿಗೊಂದು ಮೌಲ್ಯ ಇರುವುದು. ಎಂತಹ ಪ್ರತಿಕೂಲ ಪರಿಸ್ಥಿತಿಯನ್ನೂ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವ ಚಾಣಾಕ್ಷೃ ವ್ಯಕ್ತಿಯ ಮನೋಭಾವ ಅವರದ್ದು ಎಂದರು.

ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಗೋಪಾಲ್‌ರಾಜ ಅರಸ್, ಫುಟ್ ಪಲ್ಸ್ ಥೆರಪಿಯ ಆಯೋಜಕ ರಘುನಾಥ್, ಮುಖಂಡರಾದ ಜೈರಾಮ್, ಅರ್ಜುನ್, ಪಾರ್ಥ, ವಿರೂಪಾಕ್ಷ, ಸತ್ಯಾನಂದ ವಿಟ್ಟು, ಸೋಮಶೇಖರ್, ಶಿವಣ್ಣ, ರಾಜಣ್ಣ, ಲೋಹಿತ್ ಶರ್ಮ, ಪ್ರಸನ್ನಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net