ವಿಜಯೇಂದ್ರ, ಅಶೋಕ್​ ತೋರಲಿ ಸಂಯಮ

Raghupti 2
Published on

ಬಿಜೆಪಿ ಮಾಜಿ ಶಾಸಕ ಕೆ.ರಘುಪತಿ ಭಟ್​ ಸವಾಲು

ವಿಜಯವಾಣಿ ಸುದ್ದಿಜಾಲ ಉಡುಪಿ

ಬಿಜೆಪಿಯಿಂದ ನನ್ನನ್ನು ಉಚ್ಚಾಟಿಸಿದರೂ ನಾನು ಬಿಜೆಪಿಯಲ್ಲೇ ಇದ್ದೇನೆ. ಇನ್ನೂ ಸಂಯಮದಿಂದಲೇ ಇದ್ದೇನೆ. ಬಿಜೆಪಿ ನಿರ್ನಾಮವಾಗಲೆಂದು ಶಾಪ ಹಾಕಿದವರು ಎಂಪಿ, ಸಿಎಂ ಆಗುತ್ತಾರೆ. ಪ್ರಧಾನಿ ಮೋದಿ, ಬಿ.ಎಲ್​. ಸಂತೋಷ್​ ಹಾಗೂ ಆರ್​ಎಸ್​ಎಸ್​ಗೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ ಪಕ್ಷದಲ್ಲಿ ಮಣೆ ಹಾಕುತ್ತಿದ್ದಾರೆ. ಅಂತಹವರಿಗೆ ಬಿಜೆಪಿಯ ವರಿಷ್ಠರು ಸಂಯಮದ ಪಾಠ ಮಾಡಲಿ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್​ ಸವಾಲು ಹಾಕಿದರು.

ಉಡುಪಿಯ ತಮ್ಮ ಸ್ವಗೃಹದಲ್ಲಿ ಮಂಗಳವಾರ (ನ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಕಟ್ಟಡದ ಶಂಕುಸ್ಥಾಪನೆಗೆ ಬಂದಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​ ಸಂತೋಷ್​ ಅವರು ಸಂಯಮದ ಪಾಠ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.

ತಾವು ಸ್ಪರ್ಧೆ ಮಾಡಬೇಡಿ

ಬಿ.ಎಸ್​. ಯಡಿಯೂರಪ್ಪ ಶ್ರೇಷ್ಠ ನಾಯಕ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ, ಅವರ ಇಬ್ಬರು ಮಕ್ಕಳಿಗೆ ಪಕ್ಷದಲ್ಲಿ ಅವಕಾಶವೇಕೆ? ತಂದೆ&ಮಕ್ಕಳ ರಾಜಕೀಯ ಕೊನೆಯಾಗಲಿ. ವಿಜಯೇಂದ್ರ ಅವರು ಮುಂದಿನ ಚುನಾವಣೆಗೆ ನಿಲ್ಲದೆ ಸಂಯಮದಿಂದ ಇರಲಿ. ಅದೇ ರೀತಿ 8 ಬಾರಿ ಸ್ಪರ್ಧಿಸಿರುವ ಪ್ರಸ್ತುತ ವಿಪಕ್ಷ ನಾಯಕ ಆರ್​.ಅಶೋಕ್​ ಸಹ ಚುನಾವಣೆ ತ್ಯಾಗ ಮಾಡಿ ಸಂಯಮದಿಂದ ಇರಲಿ ಎಂದು ರಘುಪತಿ ಭಟ್ ಸಲಹೆ ನೀಡಿದರು.

ನನ್ನ ತಪ್ಪಾದರೂ ಏನು?

ಪಕ್ಷಕ್ಕಾಗಿ ನನ್ನ ಯೌವನ, ವ್ಯವಹಾರ, ಸಮಯ ನೀಡಿದ್ದು ಮೂರು ಬಾರಿ ಶಾಸಕನಾದ ಕೃತಜ್ಞತೆಯಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಕ್ಷುಲ್ಲಕ ಕಾರಣ ಹೇಳಿ ನನಗೆ ಟಿಕೆಟ್​ ತಪ್ಪಿಸಿದರು. ಆದರೂ ಪಕ್ಷದ ಅಭ್ಯರ್ಥಿ ಯಶ್​ಪಾಲ್​ ಸುವರ್ಣ ಗೆಲುವಿಗಾಗಿ ಪ್ರಚಾರ ಮಾಡಿದ್ದೇನೆ. ನನ್ನ ಪತ್ನಿಯನ್ನೂ ಅವರ ಪ್ರಚಾರಕ್ಕಾಗಿ ಕಳುಹಿಸಿದ್ದೇನೆ. ಡುಪಿಯಲ್ಲಿ ಬಿಜೆಪಿ ಬೆಳೆಸಲು ಕೊಡುಗೆ ನೀಡಿದ ನನ್ನನ್ನು ಪಕ್ಷ ನಡೆಸಿಕೊಂಡ ರೀತಿಗೆ ಈಗಲೂ ಬೇಸರವಿದೆ. ಪಕ್ಷ ನಿಷ್ಠೆಯೇ ನನಗೆ ಮುಳುವಾಯಿತು ಎಂದು  ಕೆ.ರಘುಪತಿ ಭಟ್​ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷಕ್ಕೆ ನನ್ನ ಕೊಡುಗೆ ಗಮನಿಸಿ ರಾಜ್ಯ ಕಾರ್ಯಕಾರಿಣಿಯಲ್ಲಾದರೂ ಸ್ಥಾನ ನೀಡಬಹುದಿತ್ತು. ಇದೀಗ ನಗರಸಭೆ ಸಹಿತ ಸ್ಥಳಿಯಾಡಳಿತ ಚುನಾವಣೆ ಸಮೀಪಿಸುತ್ತಿದೆ. ನನ್ನ ಅಗತ್ಯ ಇದ್ದಲ್ಲಿ ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅವಕಾಶ ಸಿಗದಿದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸುತ್ತೇವೆ. ನಾನು ಸೋತರೂ, ಗೆದ್ದರೂ ಬಿಜೆಪಿ ಕಾರ್ಯಕರ್ತ, ಸಾಮಾನ್ಯ ಸದಸ್ಯ. ನನ್ನದೇನಿದ್ದರೂ ಮೊದಲ ಆಯ್ಕೆ ಬಿಜೆಪಿ. | ಕೆ.ರಘುಪತಿ ಭಟ್​. ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net