

ಕುಶಾಲನಗರ:
ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬೇಸಾಯ ಪದ್ಧತಿ ಅಳವಡಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಜೊತೆಗೆ ಯುವಜನತೆಯನ್ನು ಕೃಷಿಯತ್ತ ಆಕರ್ಷಿಸಬೇಕು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ.ಎಂ. ದೇವಗಿರಿ ಹೇಳಿದರು. ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಹುಟ್ಟು ಹಬ್ಬದ ಅಂಗವಾಗಿ ಕುಶಾಲನಗರ ತಾಲೂಕು ಚಿಕ್ಕನಾಯಕನ ಹೊಸಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ಕೇವಲ ಭತ್ತ, ಜೋಳದಂಥ ಬೆಳೆಗಳಿಗೆ ಸೀಮಿತವಾಗದೇ ಸಮಗ್ರ ಬೆಳೆಗಳತ್ತ ಮುಂದಾಗಬೇಕು. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯೋಜನಗಳಿದ್ದು, ಈ ಯೋಜನೆಗಳ ಬಗ್ಗೆ ರೈತರಿಗೆ ಅರಿವಿಲ್ಲ. ಅತ್ತ ಅರಣ್ಯ ಇಲಾಖೆಯೂ ರೈತರ ಮನೆ ಬಾಗಿಲತ್ತ ತೆರಳಿ ಯೋಜನೆಗಳ ಮಾಹಿತಿಗಳಾಗಲೀ, ಅನುಕೂಲಗಳನ್ನಾಗಲೀ ಒದಗಿಸುತ್ತಿಲ್ಲ. ಕೃಷಿ ಅರಣ್ಯದಲ್ಲಿ ರೈತರಿಗೆ ಸಾಕಷ್ಟು ಪ್ರಯೋಜನಗಳಿದ್ದು ಹೆಚ್ಚು ಲಾಭದಾಯಕವಾದ ಕೃಷಿಯಾಗಿದೆ. ಜೊತೆಗೆ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಇಲಾಖೆ ಉಪನಿರ್ದೇಶಕ ಡಾ. ಸೋಮಶೇಖರ್ ಮಾತನಾಡಿ, ರೈತ ಚಳವಳಿ ಮೂಲಕ ರೈತರ ಒಳಿತಿಗಾಗಿಯೇ ತಮ್ಮ ಹೋರಾಟ ಹಾಗೂ ಜೀವನವನ್ನು ಮುಡಿಪಾಗಿಟ್ಟ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಸ್ಮರಣೆಗಾಗಿ ರೈತ ದಿನವಾಗಿ ಆಚರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಕೆ ಮಾಡುವ ಸಲುವಾಗಿ ಭತ್ತದ ಬೆಳೆ ಕ್ಷೀಣಿಸಲು ರೈತರು ಬಿಡಬಾರದು. ರೈತರು ಸುಸ್ಥಿರ ಕೃಷಿಗೆ ಮುಂದಾಗುವ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಬಹುದು ಎಂದರು.
ಕೃಷಿ ವಿವಿ ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಆರ್.ಎನ್.ಕೆಂಚರೆಡ್ಡಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಭತ್ತದ ಕೃಷಿ ಹಾಗೂ ವಿವಿಧ ಬೆಳೆಗಳ ಕುರಿತು ಕೃಷಿ ವಿಜ್ಞಾನಿ ಡಾ.ಬಸವಲಿಂಗಯ್ಯ ಹಾಗೂ ಡಾ. ದೇವರಾಜು ರೈತರಿಗೆ ಮಾಹಿತಿ ನೀಡಿದರು.
ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ದೇವರಾಜು, ಪ್ರಗತಿಪರ ಕೃಷಿಕರಾದ ಮರೂರು ಗ್ರಾಮದ ಹೆಚ್.ವಿ. ಶಿವರುದ್ರಪ್ಪ, ಟಿ.ಜೆ. ಶೇಷಪ್ಪ, ಮಣಜೂರು ಗ್ರಾಮದ ಗುರುಲಿಂಗಪ್ಪ, ಟಿ.ಕೆ. ಪಾಂಡುರAಗ, ಟಿ.ಬಿ. ಜಗದೀಶ್, ಎನ್.ಎಸ್. ರಮೇಶ್, ತೊರೆನೂರು ಗ್ರಾಪಂ ಉಪಾಧ್ಯಕ್ಷೆ ರೂಪಮಹೇಶ್, ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕಿ ಶಾರದಾ, ಸುಪರ್ಣಾ, ತೊರೆನೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಕೆ. ವಸಂತ್ ಕೃಷಿ ಇಲಾಖೆಯ ಮೈಥಿಲಿ, ಅರ್ಪಿತ ಇದ್ದರು. ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಗುರುತಿಸಿ ಗೌರವಿಸಲಾಯಿತು.