ರೈತರಿಗೆ ವಾಪಸ್ ಬರದ 1.5 ಲಕ್ಷ ಖಾಲಿ ಚೀಲ! ; ರಾಗಿ ಖರೀದಿ ಪ್ರಕ್ರಿಯೆ ಬಹುತೇಕ ಮುಕ್ತಾಯ ಜಿಲ್ಲೆಯ 10 ತಾಲೂಕುಗಳಲ್ಲಿರುವ ಕೇಂದ್ರಗಳು

Ragi Purchase Time Extension. 23-TPT,1
Published on

ತಿಪಟೂರು : ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ರೈತರಿಗೆ ಇದುವರೆಗೆ ಖಾಲಿ ಚೀಲ ಮರಳಿಸಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ. ರಾಗಿ ಖರೀದಿಗೆ ಸರ್ಕಾರ ಜ.4ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿ, ಜ.21ರವರೆಗೆ ಮುಂದುವರಿಸಿತ್ತು. ಫೆ.10ರಿಂದ ಮಾ.31ರವರೆಗೆ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿ ಇರಲಿದೆ. ಜಿಲ್ಲೆಯ ಒಟ್ಟು 10 ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ತಿಪಟೂರು ತಾಲೂಕಿನಲ್ಲಿರುವ ಖರೀದಿ ಕೇಂದ್ರದಲ್ಲಿ ತಾಲೂಕಿನ ಒಟ್ಟು 5,310 ರೈತರು ನೋಂದಾಯಿಸಿಕೊಂಡಿದ್ದು, ಒಟ್ಟಾರೆ 79,540 ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತಿದೆ.

76 ಸಾವಿರ ಕ್ವಿಂಟಾಲ್ ಖರೀದಿ: ಇಲಾಖೆ ಮಾನದಂಡಗಳ ಅನುಸಾರ ನಾಲ್ಕು ಎಕರೆಗಿಂತ ಕಡಿಮೆ ಜಮೀನುಳ್ಳ ರೈತರಿಂದ ಗುರುವಾರದವರೆಗೆ ಅಂದಾಜು 76 ಸಾವಿರ ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. ಇದರರ್ಥ ಇನ್ನು ಮೂರು ಸಾವಿರ ಕ್ವಿಂಟಾಲ್ ರಾಗಿ ಖರೀದಿಸಿದರೆ ಒಟ್ಟಾರೆ ಖರೀದಿ ಪ್ರಕ್ರಿಯೆ ಮುಕ್ತಾಯವಾಗಲಿದೆ.

1.59 ಲಕ್ಷ ಚೀಲ ಮರಳಿಸಬೇಕು: ನಿಯಮಾನುಸಾರ ರಾಗಿ ತರುವ ರೈತರಿಗೆ ಖಾಲಿ ಚೀಲ ಮರಳಿಸಬೇಕು. ತಲಾ 50 ಕಿಲೋ ತೂಕದ ಚೀಲಗಳಲ್ಲಿ ರಾಗಿ ಖರೀದಿಸಲಾಗುತ್ತಿದೆ. ಖರೀದಿ ಅಂದಾಜಿನಂತೆ 79,540 ಕ್ವಿಂಟಾಲಿಗೆ ಒಟ್ಟು 1,59,080 ಚೀಲ ಖರೀದಿ ಕೇಂದ್ರಕ್ಕೆ ಬರುತ್ತದೆ. ಇಷ್ಟೂ ಚೀಲಗಳನ್ನು ರೈತರಿಗೆ ಮರಳಿಸುವ ಜವಾಬ್ದಾರಿ ಖರೀದಿ ಕೇಂದ್ರದ್ದಾಗಿದೆ. ಆದರೆ ಇದುವರೆಗೂ ಮರಳಿಸಿಲ್ಲ ಎನ್ನಲಾಗಿದೆ. ಅಧಿಕಾರಿಗಳನ್ನು ಕೇಳಿದರೆ, ಕಳೆದ ವಾರ 1 ಸಾವಿರ ರೈತರಿಗೆ ಮರಳಿಸಿದ್ದೇವೆ. ಖಾಲಿ ಚೀಲ ಲಭ್ಯ ಇಲ್ಲದಿದ್ದರೆ, ಖರೀದಿಯ ಗ್ರೇನ್ ವೋಚರ್‌ನಲ್ಲಿ ಇಂತಿಷ್ಟು ಖಾಲಿ ಚೀಲ ವಾಪಸ್ ಕೊಡಬೇಕು ಎಂದು ಹಿಂಬರಹ ಕೊಡಲಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ರೈತರಿಗೆ ಕೊಟ್ಟಿರುವ ಗ್ರೇನ್ ವೋಚರ್‌ಗಳಲ್ಲಿ ಹಿಂಬರಹ ಕಂಡುಬರದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬೇಸಿಗೆ ಆದರೂ ರಾಗಿಯಲ್ಲಿ ತೇವಾಂಶ!: ಬೇಸಿಗೆ ಬಿಸಿಲು ಸುಡುತ್ತಿದ್ದರೂ ರಾಗಿಯಲ್ಲಿ ತೇವಾಂಶವಿದೆ ಎಂದು ಖರೀದಿ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಇವರಿಗೆ ಒಂದಷ್ಟು ಲಂಚ ಕೊಟ್ಟರೆ, ದಿಢೀರನೆ ತೇವಾಂಶ ಮಾಯವಾಗುತ್ತದೆ. ಜತೆಗೆ ಪ್ರತಿ ಚೀಲಕ್ಕೂ ಇಂತಿಷ್ಟು ಹಣ ಕೊಟ್ಟರಷ್ಟೇ ರಾಗಿ ಚೀಲಕ್ಕೆ ದಾರಿ ಎಂಬ ಅಘೋಷಿತ ನಿಯಮ ಜಾರಿಯಲ್ಲಿದೆ.

ಕಳೆದ ಬಾರಿ ಖಾಲಿ ಚೀಲದ ಬದಲಿಗೆ ಪ್ರತಿ ಚೀಲಕ್ಕೆ 22 ರೂಪಾಯಿ ಸೇರಿಸಿ ರೈತರ ಖಾತೆಗೆ ರಾಗಿ ಹಣವನ್ನು ನೇರವಾಗಿ ವರ್ಗಾಯಿಸಲಾಗುತ್ತಿತ್ತು. ಈ ಬಾರಿ ಖಾಲಿ ಚೀಲಗಳನ್ನೇ ಮರಳಿಸಲು ನಿರ್ಧರಿಸಲಾಗಿದೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಸಕಾಲಕ್ಕೆ ಖಾಲಿ ಚೀಲ ಬಾರದ ಕಾರಣ ಗ್ರೇನ್ ವೋಚರ್‌ನಲ್ಲಿ ಚೀಲಗಳ ಸಂಖ್ಯೆ ಸಹಿತ ಹಿಂಬರಹ ನೀಡಲಾಗುತ್ತಿದೆ. ಚೀಲ ಪೂರೈಕೆ ಆಗುತ್ತಲೇ ಅಷ್ಟೂ ಚೀಲಗಳನ್ನು ಮರಳಿಸಲಾಗುವುದು. ಕೆ.ಎಂ. ಶ್ರೀನಿವಾಸಯ್ಯ, ಜಂಟಿ ನಿರ್ದೇಶಕರು, ತುಮಕೂರು ಆಹಾರ ಇಲಾಖೆ ಕಳೆದ ಸಾರಿಯಂತೆ ಖಾಲಿ ಚೀಲದ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವ ನಿರೀಕ್ಷೆಯಲ್ಲಿ ರೈತರು ಸುಮ್ಮನಿದ್ದಾರೆ. 1.59 ಲಕ್ಷ ಖಾಲಿ ಚೀಲದ ಹಣವೇ 34 ಲಕ್ಷ ರೂ. ಆಗುತ್ತದೆ. ನಮಗೆ ಖಾಲಿ ಚೀಲ ಅಥವಾ ಹಣ ಬೇಕು. ಇಲ್ಲವಾದಲ್ಲಿ ಖರೀದಿ ಕೇಂದ್ರಕ್ಕೆ ಮುತ್ತಿಗೆ ಹಾಕುತ್ತೇವೆ. ತಿಮ್ಲಾಪುರ ದೇವರಾಜು, ರೈತ ಸಂಘದ ತಾಲೂಕು ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net