

ತುಮಕೂರು: ಕಳಪೆ ಬಿತ್ತನೆಬೀಜ, ಗೊಬ್ಬರ, ಕೀಟನಾಶಕಗಳನ್ನು ಮಾರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳಪೆ ಬಿತ್ತನೆಬೀಜ ಮಾರಾಟ ಮಾಡುವುದು ರೈತರನ್ನು ಕೊಲೆ ಮಾಡಿದಂತೆ. ಅಂಥ ಮಾರಾಟ ಕಂಡು ಬಂದು ರೈತರಿಗೆ ತೊಂದರೆಯಾದರೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಇಲಾಖೆ ಜಾಗೃತ ದಳ ಕಟ್ಟೆಚ್ಚರ ವಹಿಸಿದೆ, 3 ತಂಡ ರಚಿಸಲಾಗಿದ್ದು ಈಗಾಗಲೇ ರಾಜ್ಯದ ವಿವಿಧೆಡೆ ಸರಣಿ ದಾಳಿಗಳನ್ನು ನಡೆಸಿ ಕಳಪೆ ಬಿತ್ತನೆಬೀಜ, ಇನ್ನಿತರ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಸಂಬಂಧಿಸಿದ ಅಂಗಡಿಗಳ ಪರವಾನಗಿ ಅಮಾನತಿನಲ್ಲಿಟ್ಟು ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸಹ ಹೂಡಲಾಗಿದೆ ಎಂದರು.
ಪ್ರತಿ ತಾಲೂಕಿಗೆ ಕೋಲ್ಡ್ ಸ್ಟೋರೇಜ್: ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸುವ ಕುರಿತು ಸಿಎಂಗೆ ವರದಿ ಸಲ್ಲಿಸಿದ್ದೇನೆ. ಎಪಿಎಂಸಿಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್ ಬಸವರಾಜು, ಶಾಸಕರಾದ ಎಂ.ವಿ.ವೀರಭದ್ರಯ್ಯ, ಬಿ.ಸತ್ಯನಾರಾಯಣ, ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಮ್, ವಿಧಾನ ಪರಿಷತ್ ಸದಸ್ಯರಾದ ಚೌಡರಡ್ಡಿ ತೂಪ್ಪಲ್ಲಿ, ಬೆಮೆಲ್ ಕಾಂತರಾಜ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಎಸ್ಪಿ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ , ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಇತರರಿದ್ದರು.
ರೈತರಿಂದಲೇ ಉತ್ಪನ್ನ ಖರೀದಿಸಿ: ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ನಷ್ಟವಾಗುತ್ತಿದೆ. ಹಾಗಾಗಿ, ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ರೈತರಿಂದಲೇ ನೇರವಾಗಿ ಉತ್ಪನ್ನ ಖರೀದಿಸಿ, ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು. ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಗಮನ ಸೆಳೆದರು.
ಪಹಣಿ ನೋಡಿ ಅನುಮತಿ ಕೊಡಿ: ಕೃಷಿ ಚಟುವಟಿಕೆಗಳಿಗೆೆ ಅಡ್ಡಿಯಾಗದಂತೆ ರೈತರಿಗೆ ಹಸಿರು ಪಾಸ್ ನೀಡಲಾಗಿದೆ. ಇದು ಕೆಲವರಿಗೆ ಮಾತ್ರ ಸಿಕ್ಕಿದೆ, ಆದ್ದರಿಂದ ಪಾಸ್ ಬದಲು ಆಧಾರ್‌ಕಾರ್ಡ್, ಪಹಣಿ ತೋರಿಸಿ ಸಂಚರಿಸಲು ಅನುಮತಿ ನೀಡುವಂತೆ ರೈತರೊಬ್ಬರು ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದರು.
ಫಸಲ್ ಬಿಮಾ ಯೋಜನೆ: ರಾಜ್ಯ ಸರ್ಕಾರ, ರೈತರಿಗೆ ಫಸಲ್ ಬಿಮಾ ಯೋಜನೆ ಹಣ ಬಿಡುಗಡೆ ಮಾಡಿದೆ. ತನ್ನ ಪಾಲಿನ ಷೇರುಹಣ 18.59 ಕೋಟಿ.ರೂ.,ಗಳನ್ನು ಬಿಡುಗಡೆ ಮಾಡಿದ್ದು, 1,13,876 ರೈತ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಆದರೆ ರೈತರಿಗೆ ವಿವಿಧ ಯೋಜನೆಯಲ್ಲಿ ನೀಡುವ ಸಹಾಯಧನ, ವಿಮೆ ಹಣವನ್ನು ಬ್ಯಾಂಕಿನವರು ಅವರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬ್ಯಾಂಕುಗಳ ಪಟ್ಟಿಯೊಂದಿಗೆ ಮಾಹಿತಿ ನೀಡಿದ್ದೇವೆ, ಅವರು ಅಂತಹ ಬ್ಯಾಂಕುಗಳಿಗೆ ನೋಟಿಸ್ ನೀಡಿದ್ದಾರೆ ಎಂದು ಕೃಷಿ ಸಚಿವ
ಬಿ.ಸಿ.ಪಾಟೀಲ್ ಹೇಳಿದರು.
ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಇಲ್ಲ: ಕರೊನಾ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪರಿಕರಗಳು ಹಾಗೂ ಬೋರ್‌ವೆಲ್, ಟ್ರ್ಯಾಕ್ಟರ್ ರಿಪೇರಿಗೆ ಅವಕಾಶ ಮಾಡಿ ಕೊಡಿ. ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜಗಳು, ಗೊಬ್ಬರ ಮತ್ತು ಇನ್ನಿತರ ಅವಶ್ಯಕ ಪರಿಕರಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ರೈತರು ನಿಶ್ಚಿಂತೆಯಿಂದ ಕೃಷಿ ಕಾಯಕ ಮುಂದುವರಿಸಲು ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದರು.
ಸಮಗ್ರ ವರದಿ ಸಲ್ಲಿಕೆ: ತುಮಕೂರು ಸೇರಿ 26 ಜಿಲ್ಲೆಗಳ ಕೃಷಿ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿದ್ದೇನೆ. 19 ಜಿಲ್ಲೆಗಳ ಕೃಷಿ ಸ್ಥಿತಿಗತಿ-ಪರಿಹಾರ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿದ್ದೇನೆ. ಇನ್ನೂ 4 ಜಿಲ್ಲೆಗಳ ಪರಿಶೀಲನೆ ನಂತರ ಮತ್ತೊಮ್ಮೆ ಸಮಗ್ರ ವರದಿ ಸಲ್ಲಿಸುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದರು.