ಅತಿವೃಷ್ಟಿ ನಿರ್ವಹಣೆಗೆ ಕಾರ್ಯಪಡೆ ರಚನೆ: ಕಂದಾಯ ಸಚಿವ ಕೃಷ್ಣಭೈರೇಗೌಡ

mysore
Published on

ಮೈಸೂರು: ನೆರೆ ನಿರ್ವಹಣೆಗಾಗಿ ಪಂಚಾಯಿತಿ ಮಟ್ಟದಲ್ಲಿ ‘ಅತಿವೃಷ್ಟಿ ನಿರ್ವಹಣಾ ಕಾರ್ಯಪಡೆ’ ರಚಿಸಲಾಗಿದ್ದು, ಪ್ರಕೃತಿ ನಿರ್ವಹಣೆ ಕಾಯ್ದೆಯಡಿ ಇದಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.


ನಗರದಲ್ಲಿ ಮಂಗಳವಾರ ಮೈಸೂರು ವಿಭಾಗೀಯ ಮಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಕೆಲ ಭಾಗದಲ್ಲಿ ಅತಿವೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಬಾಧಿತವಾಗುವ 1,763 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಲಾಗಿದೆ. ಅತಿವೃಷ್ಟಿದಿಂದ ಉಂಟಾಗುವ ಅನಾಹುತ ತಡೆಗೆ ಈ ಕಾರ್ಯಪಡೆ ಕ್ರಮ ವಹಿಸಲಿದೆ. ಗ್ರಾಪಂ, ಕಂದಾಯ, ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರಿಂಗ್ ವಿಭಾಗ, ಅಗ್ನಿಶಾಮಕ, ಸಣ್ಣ ನೀರಾವರಿ ಇಲಾಖೆಯ ಸಿಬ್ಬಂದಿ, ಪೊಲೀಸರು ಇದರಲ್ಲಿ ಇರುತ್ತಾರೆ. ಇವರು ಗ್ರಾಪಂ ಪ್ರದೇಶದಲ್ಲೇ ಮೊಕ್ಕಾಂ ಹೂಡಲಿದ್ದಾರೆ ಎಂದರು.


ಇದು ಪರಿಸ್ಥಿತಿಗೆ ತಕ್ಕಂತೆ ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳಲಿದೆ. ಜತೆಗೆ, ಪ್ರತಿ ಗಾಪಂಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಕಲ್ಪಿತ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ. ಅಂದಾಜು ಮಾಡಿ ಅನಾಹುತ ತಪ್ಪಿಸಲು ಗುರಿ ನೀಡಲಾಗಿದೆ ಎಂದು ತಿಳಿಸಿದರು.


ಅತಿವೃಷ್ಟಿಯ ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯನ್ನು ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ, ಬೆಂಗಳೂರು, ರಾಯಚೂರಿನಲ್ಲಿ ನಿಯೋಜಿಸಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು ಬೆಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸನ್ನದ್ಧಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಗರ್‌ಹುಕುಂ ಅರ್ಜಿ ವಿಲೇವಾರಿಗೆ ಗಡುವು


ಬಾಕಿ ಉಳಿದಿರುವ ಬಗರ್‌ಹುಕುಂ ಅರ್ಜಿಗಳ ವಿಲೇವಾರಿ ಮಾಡಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಗಡುವು ನೀಡಲಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.


ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ ಆಯಾ ತಹಸೀಲ್ದಾರ್ ಅರ್ಜಿ ಮಂಡನೆ ಮಾಡಿ ಒಪ್ಪಿಗೆ ಪಡೆದು ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬೇಕು. ಸ್ಥಳ ಪರಿಶೀಲನೆ ನಡೆಸಿ 10 ವರ್ಷ ಸ್ಯಾಟ್‌ಲೈಟ್ ಚಿತ್ರಣದ ನಕ್ಷೆ ನೋಡಿ ಸಾಗುವಳಿ ಕುರಿತು ಖಾತ್ರಿಪಡಿಸಿಕೊಳ್ಳಬೇಕು. ನಕಲಿ ಪ್ರಕರಣಗಳು ನುಸುಳದಂತೆ ಕ್ರಮ ವಹಿಸಲು ತಹಸೀಲ್ದಾರರಿಗೆ ಸೂಚಿಸಲಾಗಿದೆ ಎಂದರು.


ಬಗರ್ ಹುಕುಂ ಜಾಗವನ್ನು ದುರಸ್ತಿ, ಭೂಮಾಪನ ಇನ್ನಿತರ ಭೂಪ್ರಕ್ರಿಯೆ ಪೂರ್ಣಗೊಳಿಸಿ ಈ ಸಾಗುವಳಿದಾರರಿಗೆ ಡಿಜಿಟಲ್ ಹಕ್ಕು ಪತ್ರ ನೀಡಿ ಅವರಿಗೆ ಭೂಭದ್ರತೆ ಕಲ್ಪಿಸಲಾಗುವುದು. ಜಾಗವನ್ನು ಸಕ್ರಮಗೊಳಿಸಿ ಕ್ರಯಪತ್ರವನ್ನು ನೀಡಿ ಭೂಮಾಲೀಕತ್ವವನ್ನು ಖಾತ್ರಿಪಡಿಸಿಕೊಡಲಾಗುವುದು. ಭವಿಷ್ಯದಲ್ಲಿ ಭೂ ವ್ಯಾಜ್ಯ, ವಂಚನೆಗೆ ಒಳಗಾದಂತೆ ಮಾಡಲಾಗುವುದು ಎಂದರು.


ಕೃಷಿ ಭೂಮಿ ಆರ್‌ಟಿಸಿಯೊಂದಿಗೆ ರೈತರ ಆಧಾರ್ ನಂಬರ್ ಜೋಡಣೆ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ರಾಜ್ಯದಲ್ಲಿ 4 ಕೋಟಿ ಬಹುಮಾಲೀತ್ವದ ಆರ್‌ಟಿಸಿಗಳಿವೆ. ಈ ಪೈಕಿ 1.92 ಕೋಟಿ ಭೂಮಾಲೀಕರ ಆಧಾರ್ ನಂಬರ್ ಅನ್ನು ಆರ್‌ಟಿಸಿಯೊಂದಿಗೆ ಲಿಂಕ್ ಮಾಡಲಾಗಿದೆ. ಇದರಿಂದ ನಕಲಿ, ವಂಚನೆ ತಪ್ಪಿಲಿದೆ. ಭೂಮಾಲೀಕರಿಗೆ ಭದ್ರತೆ, ಖಾತ್ರಿ ದೊರೆಯಲಿದೆ. ಆದ್ದರಿಂದ ರೈತರು ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

767 ಸರ್ವೇಯರ್ ನೇಮಕಕ್ಕೆ ಅಧಿಸೂಚನೆ


ಭೂಮಾಪಕರ ಸಮಸ್ಯೆ ತೀವ್ರವಾಗಿದ್ದು, ಇದನ್ನು ಬಗೆಹರಿಸಲು 767 ಸರ್ವೇಯರ್ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಹೆಚ್ಚುವರಿಯಾಗಿ 300 ಹುದ್ದೆಗಳಿಗೂ ಮಂಜೂರಾತಿ ದೊರೆತಿದೆ. ತಾಲೂಕು ಮಟ್ಟ ಎಡಿಎಲ್‌ಆರ್ 43 ಹುದ್ದೆಗಳ ಭರ್ತಿಗೂ ಕ್ರಮ ವಹಿಸಲಾಗಿದೆ.

23 ಕೋಟಿ ರೂ. ವೆಚ್ಚದಲ್ಲಿ ಜಿಪಿಆರ್ ಹೊಂದಿರುವ ಆಧುನಿಕ ಉಪಕರಣಗಳನ್ನು ಭೂಮಾಪಕರಿಗೆ ನೀಡಲಾಗಿದೆ. 1,200 ಪರವಾನಗಿ ಭೂಮಾಪಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಸರ್ವೇ ಪ್ರಗತಿಗೆ ವೇಗ ನೀಡಲಾಗಿದೆ ಎಂದರು.


1,000 ಗ್ರಾಮಲೆಕ್ಕಿಗ ಹುದ್ದೆಗಳ ನೇಮಕಾತಿಗೂ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, ಮೀಸಲಾತಿ ಅನ್ವಯ ಆಯಾ ಜಿಲ್ಲಾಧಿಕಾರಿಗಳು ನೇಮಕಾತಿ ಮಾಡಲಿದ್ದು, ಇದರಿಂದ ಗ್ರಾಮಲೆಕ್ಕಿಗರ ಕೊರತೆ ನೀಗಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಭೂಪರಿವರ್ತನೆಯಾದ ಬಳಿಕ ಆರ್‌ಟಿಸಿ ಬದಲಾಗಿ ಸ್ಥಳೀಯ ಸಂಸ್ಥೆ ದಾಖಲೆಯಲ್ಲಿ ನಮೂದಾಗಬೇಕು. ಇದು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಈ ಹಿಂದಿನಿಂದಲೂ ಈ ರೀತಿ ಬೇಜವಾಬ್ದಾರಿ ಮುಂದುವರಿದುಕೊಂಡು ಬಂದಿದ್ದು, ಇದನ್ನು ಸರಿಪಡಿಸುವ ಕೆಲಸ ನಡೆದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net