ನವದುರ್ಗಾ ಲೇಖನ ಯಜ್ಞ ಸಮಿತಿ ರಚನೆ

kaapu
Published on

ಬಂಟ್ವಾಳ: ಕಾಪುವಿನಲ್ಲಿ 99 ಕೋಟಿ ರೂ.ವೆಚ್ಚದಲ್ಲಿ ಭವ್ಯವಾದ ಮಾರಿಕಾಂಬಾ ದೇವಸ್ಥಾನ ನಿರ್ಮಾಣವಾಗಲಿದ್ದು, ಇದರ ಬ್ರಹ್ಮಕಲಶಾದಿ ಕಾರ್ಯಕ್ರಮ ಫೆಬ್ರವರಿ 25ರಿಂದ ಮಾರ್ಚ್ 5ರವರೆಗೆ ನಡೆಯಲಿವೆ. ಈ ಸಂದರ್ಭ ಕ್ಷೇತ್ರದ ಅಭಿವೃದ್ಧಿ ಹಾಗೂ ಲೋಕಕಲ್ಯಾಣಾರ್ಥವಾಗಿ ನವದುರ್ಗಾ ಲೇಖನ ಯಜ್ಞ ನಡೆಯಲಿದೆ. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ ವತಿಯಿಂದ ಕಾಪುವಿನ ಶ್ರೀ ಮಾರಿಯಮ್ಮ ಕ್ಷೇತ್ರದ ಸಾನ್ನಿಧ್ಯ ವೃದ್ಧಿಗಾಗಿ ನವವಿಧದ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿಕಾಯಾಗ ಇದರಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಇದರ ಮೂಲಕ ನವದುರ್ಗಾ ಲೇಖನ, ಯಜ್ಞದಲ್ಲಿ ಸಂಕಲ್ಪಪೂರ್ವಕ ಭಾಗಿಯಾಗಲು ಸಾಧ್ಯವಿದೆ ಎಂದು ಯಜ್ಞ ಸಮಿತಿಯ ದ.ಕ.ಜಿಲ್ಲಾ ಪ್ರಧಾನ ಸಂಚಾಲಕ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.

ಬಂಟ್ವಾಳ ತಾಲೂಕುಮಟ್ಟದ ಸಮಿತಿ ರಚನೆ ಸಂದರ್ಭ ಈ ಕುರಿತು ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಾಹಿತಿ ನೀಡಿದರು. ಲೇಖನ ಯಜ್ಞದಲ್ಲಿ ಭಾಗಿಯಾದವರು, ಅಕ್ಟೋಬರ್ 29ರಂದು ನಡೆಯಲಿರುವ ವಾಗೀಶ್ವರಿ ಪೂಜೆಯಂದು ಪುಸ್ತಕ ಪಡೆದುಕೊಂಡು, 45 ದಿನಗಳ ಒಳಗಾಗಿ ಪುಸ್ತಕ ಸಾನ್ನಿಧ್ಯಕ್ಕೆ ತಲುಪಿಸಿ, ಫೆ.4, 2025ರಂದು ನಡೆಯಲಿರುವ ನವಚಂಡಿಯಾಗದಲ್ಲಿ ಭಾಗವಹಿಸಬೇಕು ಎದರು.

99999 ಭಕ್ತರು ಸೇರಿ ಒಂಬತ್ತು ದಿನ ದಿನಕ್ಕೆ 9 ಬಾರಿ ನದುರ್ಗೆಯರ ಹೆಸರು ಬರೆದು, ಕಾಪುವಿನ ಅಮ್ಮನ ಹೆಸರಿನೊಂದಿಗೆ ಮುಕ್ತಾಯ ಮಾಡುವುದು, ಒಂಬತ್ತು ದಿನಗಳವರೆಗೆ ನವದುರ್ಗೆಯರ ಲೇಖನ ಬರೆದು, ಕೊನೇಪುಟದಲ್ಲಿ ತಮ್ಮ ಹೆಸರು, ರಾಶಿ, ನಕ್ಷತ್ರ ಮತ್ತು ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ, ಕಾಪುವಿನ ಅಮ್ಮನನ್ನು ನೆನೆದು ಒಂಬತ್ತನೇ ದಿನಕ್ಕೆ ಮುಕ್ತಾಯಗೊಳಿಸುವುದು. ತಾವು ಬರೆದ ಪುಸ್ತಕ ಹಾಗೂ ತೆಗೆದಿಟ್ಟ 9 ಮುಷ್ಟಿಅಕ್ಕಿಯನ್ನು ಹಾಗೂ ಶಿಲಾಸೇವೆಯೊಂದಿಗೆ ಕಾಪುವಿನ ಅಮ್ಮನ ಸನ್ನಿಧಾನಕ್ಕೆ ಸಮರ್ಪಣೆ ಮಾಡಬೇಕು ಎಂದರು.

ಸಮಿತಿಯಲ್ಲಿ ಜಿಲ್ಲಾ ಮುಖ್ಯ ಸಂಚಾಲಕ ಪುರುಷೋತ್ತಮ ಭಂಡಾರಿ ಅಡ್ಯಾರ್, ಜಿಲ್ಲಾ ಸಂಚಾಲಕರಾಗಿ ಮನೀಶ್ ರೈ, ಕೃಷ್ಣ ಶೆಟ್ಟಿ ತಾರೆಮಾರ್, ಅಶ್ವತ್ಥಾಮ ಹೆಗ್ಡೆ, ಪ್ರದೀಪ್ ಆಳ್ವ ಕದ್ರಿ, ಸಂತೋಷ್ ಶೆಟ್ಟಿ ಶೆಡ್ಡೆ, ಅಶ್ವಿತ್ ಸುವರ್ಣ, ಬಾಲಕೃಷ್ಣ ಕೊಟ್ಟಾರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದು, ಬಂಟ್ವಾಳ ತಾಲೂಕಿನಲ್ಲಿ ಸಮಿತಿ ಸಂಚಾಲಕರಾಗಿ ತಾರಾನಾಥ ಕೊಟ್ಟಾರಿ ಹಾಗೂ ಮಣಿಮಾಲಾ ಶೆಟ್ಟಿ ಕಾರ್ಯನಿರ್ವಹಿಸುತ್ತಾರೆ ಎಂದರು.

ಜಿಲ್ಲಾ ಪ್ರಧಾನ ಸಂಚಾಲಕ ಪುರುಷೋತ್ತಮ ಭಂಡಾರಿ ಅಡ್ಯಾರ್, ಸಂಚಾಲಕರು, ತಾಲೂಕಿನ ನಾನಾ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ತಾಲೂಕು ಸಂಚಾಲಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net