

ಮಂಡ್ಯ: ತಾಲೂಕಿನ ವಿ.ಸಿ ಫಾರ್ಮ್ನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಪರಿಶೀಲನೆಗಾಗಿ ಆರು ಜನರ ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ರಾಜ್ಯ ಬಜೆಟ್ನಲ್ಲಿ ಘೋಷಣೆಯಾದ ಒಂದು ತಿಂಗಳೊಳಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಅವರು ಕ್ರಮ ವಹಿಸಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ರಾಜೇಂದ್ರ ಪ್ರಸಾದ್ ಸಮಿತಿಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅಂತೆಯೇ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ್, ಬೆಂಗಳೂರು ಕೃಷಿ ವಿವಿಯ ನಿವೃತ್ತ ಕುಲಸಚಿವ ಡಾ.ಎ.ಬಿ.ಪಾಟೀಲ್, ನಿವೃತ್ತ ಆಡಳಿತಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್, ಆಡಳಿತ ಸುಧಾರಣಾ ಇಲಾಖೆ ನಿವೃತ್ತ ಜಂಟಿ ಕಾರ್ಯದರ್ಶಿ ಚಂದ್ರಹಾಸ್ ಜಿ.ತಾಳೂಕರ ಸದಸ್ಯರಾಗಿ ಹಾಗೂ ಧಾರವಾಡ ಕೃಷಿ ವಿ.ವಿ ಶೈಕ್ಷಣಿಕ ನಿರ್ದೇಶಕ ಡಾ.ವಿ.ಆರ್.ಕಿರೇಸೂರ್ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಫೆ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನಲ್ಲಿ ಮಂಡ್ಯ ತಾಲೂಕು ವಿ.ಸಿ ಫಾರ್ಮ್ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಮುಂದಿನ ಹಂತವಾಗಿ ಸಮಿತಿ ರಚನೆ ಮಾಡಲಾಗಿದೆ.