ಶೀಘ್ರ ಬಗರ್‌ಹುಕುಂ ಕಮಿಟಿ ರಚನೆ

6 smg 7
ಶಿವಮೊಗ್ಗದಲ್ಲಿ ಸಭೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು, ಸಚಿವರು.
Published on

ಶಿವಮೊಗ್ಗ: ಶೀಘ್ರ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಬಗರ್‌ಹುಕುಂ ಕಮಿಟಿ ರಚನೆ ಮಾಡಲಾಗುವುದು. ದಿಶಾಂಕ್ ಆ್ಯಪ್ ಮೂಲಕ ಫಾರ್ಮ್ 57ರ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇಗೆ ತಹಸೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, 57ರಡಿ ಅರ್ಜಿ ವಿಲೇವಾರಿಗೆ ಒಂದು ವರ್ಷ ಕಾಲಮಿತಿ ಇದೆ. ಆದರೆ 15 ವರ್ಷ ತೆಗೆದುಕೊಂಡಿದ್ದೇವೆ. ಈ ಬಾರಿ ಆ ರೀತಿ ಆಗುವುದಕ್ಕೆ ಬಿಡುವುದಿಲ್ಲ. ಪ್ರತಿ ತಿಂಗಳು ತಹಸೀಲ್ದಾರ್‌ಗಳು ಕಾಲಮಿತಿಯೊಳಗೆ ಅರ್ಜಿಗಳ ವಿಲೇ ಮಾಡಿದ ವಿವರವನ್ನು ಆ್ಯಪ್‌ನಲ್ಲಿ ದಾಖಲಿಸಬೇಕು ಎಂದರು.
ತಹಸೀಲ್ದಾರ್‌ಗಳು ಆಪ್‌ನಲ್ಲಿ ಅರ್ಜಿ ಅಪ್‌ಲೋಡ್ ಮಾಡಬೇಕು. ಗ್ರಾಮ ಲೆಕ್ಕಿಗರು ಸ್ಥಳಕ್ಕೆ ತೆರಳಿ ಫೋಟೋ ಅಪ್‌ಲೋಡ್ (ಜಿಯೋ ಫೆನ್ಸಿಂಗ್) ಮಾಡಬೇಕು. ಜಾಗ ಉಳುಮೆ ಮಾಡಲಾಗುತ್ತಿದೆಯಾ ಎಂಬುದನ್ನೂ ಪರಿಶೀಲಿಸಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲೇ 97 ಸಾವಿರ ಫಾರಂ 57ರ ಅಡಿ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಸಮಸ್ಯೆಗಳು ಜಟಿಲವಾಗಿವೆ. ಆ್ಯಪ್‌ನಲ್ಲೇ 15 ವರ್ಷದ ಸ್ಯಾಟಲೈಟ್ ಇಮೇಜ್ ನೀಡಲಾಗುವುದು. ಅರ್ಜಿದಾರರು 15 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರಾ ಅಥವಾ ಇಲ್ಲವಾ ಎಂಬುದು ಸುಲಭವಾಗಿ ತಿಳಿಯಲಿದೆ. ಅಲ್ಲದೆ ಗ್ರಾಮ ಲೆಕ್ಕಿಗರು ಸರ್ಕಾರಿ ಜಾಗದ ಬಗ್ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳ ಪರಿಶೀಲಿಸಿ ಆನ್‌ಲೈನ್‌ನಲ್ಲೇ ವರದಿ ನೀಡಬೇಕು. ಸರ್ಕಾರಿ ಜಾಗ ರಕ್ಷಣೆ ಮಾಡುವಂತಹ ವ್ಯವಸ್ಥೆ ಐದಾರು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದರು.
ಸಬ್ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ, ಈ ಕಚೇರಿಗೆ ಸಿಎ ನಿವೇಶನ ಮಂಜೂರಾತಿ, ತಹಸೀಲ್ದಾರ್ ಕಚೇರಿ ಮೂಲಸೌಕರ್ಯ ಅಭಿವೃದ್ದಿ, ಹಕ್ಕುಪತ್ರ ವಿತರಣೆ, ರುದ್ರಭೂಮಿಗೆ ಜಾಗ, ಗೋಶಾಲೆ ನಿರ್ಮಾಣದ ಕುರಿತು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು. ಗ್ರಾಮ ಲೆಕ್ಕಿಗರು, ಆರ್‌ಐ ಸೇರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಸಲಹೆ ಮತ್ತು ಮನವಿ ಸ್ವೀಕರಿಸಿದರು. ಶಾಸಕಿ ಶಾರದಾ ಪೂರ್ಯಾನಾಯ್ಕ, ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಭೂಮಾಪನ ಇಲಾಖೆ ಆಯುಕ್ತ ಜೆ.ಮಂಜುನಾಥ್, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ.ವಸಂತಕುಮಾರ್, ಡಿಸಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net