

ಪಡುಬಿದ್ರಿ: ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರರಾದ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ ಕ್ರೋಧಿ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚಾಚರಣೆ ಜುಲೈ 21ರಿಂದ ಸೆ.18ರವರೆಗೆ ಪಡುಕುತ್ಯಾರು ಮಹಾಸಂಸ್ಥಾನದಲ್ಲಿ ನಡೆಯಲಿದೆ.
ಈ ನಿಟ್ಟಿನಲ್ಲಿ ಚಾತುರ್ಮಾಸ್ಯ ವ್ರತಾಚಾಚರಣೆ ಸಿದ್ಧತೆ, ಪೂರ್ವಭಾವಿ ಕ್ಷೇತ್ರ ಸಂದರ್ಶನ ಪೂರಕವಾಗಿ ವಿವಿಧ ಸಮಿತಿಗಳ ರಚನೆ ಬಗ್ಗೆ ತೀರ್ಮಾನ ಕೈಗೊಳ್ಳಲು ಪಡುಕುತ್ಯಾರು ಮಹಾಸಂಸ್ಥಾನದಲ್ಲಿ ಜೂನ್ 9ರಂದು ಮಧ್ಯಾಹ್ನ 3ಕ್ಕೆ ವಿಶೇಷ ಸಭೆ ಆಯೋಜಿಸಲಾಗಿದೆ. ಆನೆಗೊಂದಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸುವರು. ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಪ್ರಥಮ ವಿಶ್ವಸ್ಥರಾದ ಶ್ರೀ ಕಾಳಿಕಾಂಬಾ ದೇವಳಗಳ ಆಡಳಿತ ಮೊಕ್ತೇಸರರು, ಅಧ್ಯಕ್ಷರು, ಆಯ್ಕೆ ಅಥವಾ ನೇಮಕಗೊಂಡ ವಿಶ್ವಸ್ಥರು, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ, ಆನೆಗುಂದಿ ಗುರುಸೇವಾ ಪರಿಷತ್ತು, ಅಸೆಟ್, ಗೋಪರ್ಯಾವರಣ್ ಟ್ರಸ್ಟ್, ಶ್ರೀ ಸರಸ್ವತೀ ಮಾತೃಮಂಡಳಿ, ಶ್ರೀ ಸರಸ್ವತೀ ಪೂರ್ವ ಛಾತ್ರಾ ಸಂಘದ ಪದಾಧಿಕಾರಿಗಳು, ವಿಶೇಷ ಆಮಂತ್ರಿತರು ಸಭೆಯಲ್ಲಿ ಭಾಗವಹಿಸುವರು ಎಂದು ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.