

ಕೊಪ್ಪಳ: ಜನರು ಕೇಳಿದರೆ ಫಾರ್ಮ್ ನಂ.3 ನೀಡಲು ಕಾನೂನು ತೊಡಕಿದೆ ಎಂದು ಹೇಳುವ ಅಧಿಕಾರಿಗಳು, ಏಜೆಂಟ್‌ಗಳ ಮೂಲಕ ಕೆಲವರಿಗೆ ನೀಡುತ್ತಿದ್ದಾರೆ. ಇದು ಹೇಗೆ ಸಾಧ್ಯ ? ಈ ಬಗ್ಗೆ ಹಲವು ಬಾರಿ ಚರ್ಚಿಸಿದ್ದು, ಪ್ರಕರಣದ ತನಿಖೆ ಕುರಿತು ಲೋಕಾಯುಕ್ತಕ್ಕೆ ದೂರು ನೀಡುವಂತೆ ನಗರಸಭೆ ಸದಸ್ಯರು ಆಗ್ರಹಿಸಿದರು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಸದಸ್ಯರೆಲ್ಲರೂ ಪ್ರಕರಣ ಗಂಭೀರವಾಗಿ ಪರಿಗಣಿಸಲು ಒಕ್ಕೊರಲಿನಿಂದ ಒತ್ತಾಯಿಸಿದರು. ವಿರೂಪಾಕ್ಷಪ್ಪ ಮೋರನಾಳ ಮಾತನಾಡಿ, 2017ರಿಂದ ಫಾರ್ಮ್ 3 ಸಮಸ್ಯೆಯಾಗಿದೆ. ಜನರು ಪರದಾಡುತ್ತಿದ್ದಾರೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸಿದ್ದರೂ ಆಸ್ತಿ ಮಾರಾಟ ಮಾಡಲಾಗುತ್ತಿಲ್ಲ. ಆದರೆ, ಕೆಲವರಿಗೆ ನೀಡುತ್ತಿದ್ದು, ಅದು ಹೇಗೆ ? ಎಂದರು. ಮುತ್ತುರಾಜ ಕುಷ್ಟಗಿ, ರಾಜಶೇಖರ್ ಆಡೂರು ಇತರರು ದನಿಗೂಡಿಸಿದರು. ಪೌರಾಯುಕ್ತ ಎಚ್.ಎನ್.ಭಜಕ್ಕನವರ್ ಉತ್ತರಿಸಿ, ಸರ್ಕಾರದ ಆದೇಶದಂತೆ 2017ರಿಂದ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯದ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಫಾರ್ಮ್ 3 ನೀಡುತ್ತಿಲ್ಲ. ನಕಲಿ ಪ್ರಮಾಣ ಪತ್ರ ನೀಡಿದ ಸಂಬಂಧ ಮೂವರ ವಿರುದ್ಧ ನಾನೇ ಡಿಸಿ ಹಾಗೂ ಪೊಲೀಸರಿಗೆ ದೂರು ನೀಡಿರುವೆ. ಸದಸ್ಯರೆಲ್ಲರ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ ಯಾವುದೇ ವಾರ್ಡ್‌ನಲ್ಲಿ ಸ್ವಚ್ಛತೆ ಇಲ್ಲ. ಚರಂಡಿ ಸ್ವಚ್ಛಗೊಳಿಸುತ್ತಿಲ್ಲ. ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ನೇಮಿಸಿಕೊಳ್ಳುತ್ತಿಲ್ಲವೆಂದು ಸದಸ್ಯರು ಆರೋಪಿಸಿದರು. ಪೌರಾಯುಕ್ತರು ಮಾತನಾಡಿ, 2011ರ ಜನಸಂಖ್ಯೆಯಂತೆ 119 ಜನಪೌರ ಕಾರ್ಮಿಕರಿರಬೇಕು. 101 ಇದ್ದಾರೆ. ನೇಮಕಾತಿಗೆ ಸರ್ಕಾರ ಅನುಮತಿ ನೀಡಿಲ್ಲ. ಸದ್ಯ ಗವಿಮಠ ಜಾತ್ರೆ ಇದ್ದು, 27 ಜನರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡಿದ್ದು, ಹಂತ ಹಂತವಾಗಿ ವಾರ್ಡ್‌ಗಳಿಗೆ ಕಳಿಸಿ ಸ್ವಚ್ಛತೆ ಮಾಡಿಸಲಾಗುವುದೆಂದರು. ನೀರಗಂಟಿಗಳು ಬಿಲ್ ಕಲೆಕ್ಟರ್ ಕೆಲಸ ಮಾಡುತ್ತಿದ್ದಾರೆ. ಅವರನ್ನು ಮೂಲ ಕೆಲಸಕ್ಕೆ ಕಳಿಸುವಂತೆ ಸಿದ್ದು ಮ್ಯಾಗೇರಿ ಒತ್ತಾಯಿಸಿದರು. ಬೇರೆಯವರನ್ನು ನೇಮಿಸಿಕೊಳ್ಳುವುದಾಗಿ ಪೌರಾಯುಕ್ತರು ಭರವಸೆ ನೀಡಿದರು.
ಸದಸ್ಯರು ನೀಡಿದ ವಿವಿಧ ಕಾಮಗಾರಿಗಳನ್ನು ಹಣಕಾಸು ಪರಿಸ್ಥಿತಿ ನೋಡಿಕೊಂಡು ತುರ್ತು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ನಿರ್ಣಯ ಅಂಗೀಕರಿಸಲಾಯಿತು. ನಗರದ ಗಡಿಗಳಲ್ಲಿ ನಾಲ್ಕು ಕಡೆ ಸ್ವಾಗತ ಕಮಾನು ಸ್ಥಾಪನೆಗೆ ನಗರಸಭೆ ಅನುದಾನ ಬದಲು, ವಿವಿಧ ಕಾರ್ಖಾನೆಗಳಿಗೆ ಜಾಹೀರಾತು ಹಾಕಿಕೊಳ್ಳಲು ಅನುಮತಿ ನೀಡಿ, ಅವರಿಂದಲೇ ಅನುಷ್ಠಾನಗೊಳಿಸಲು ಸದಸ್ಯರು ಒಪ್ಪಿಗೆ ಸೂಚಿಸಿದರು. ವಿವಿಧ ವಾರ್ಡ್‌ಗಳಲ್ಲಿ ವಿದ್ಯುತ್ ದೀಪ ನಿರ್ವಹಣೆ ಏಜೆನ್ಸಿ ಬದಲಾವಣೆಗೆ ಸದಸ್ಯರು ಸೂಚಿಸಿದರು. ಗುತ್ತಿಗೆದಾರರ ಅವಧಿ ಒಂದು ತಿಂಗಳು ಬಾಕಿ ಇದ್ದು, ಬಳಿಕ ಹೊಸ ಏಜೆನ್ಸಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು. ಉಪಾಧ್ಯಕ್ಷೆ ಆಯೇಷಾ ರುಬಿನಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಯಲ್ಲಮ್ಮ ಗಿಣಿಗೇರಿ, ಎಇಇ ಜಯಶ್ರೀ ಇದ್ದರು.
ಮೀಟಿಂಗ್ ಬಹಿಷ್ಕರಿಸಿದ ಬಿಜೆಪಿಗರು: ನಿಯಮಿತವಾಗಿ ಸಭೆ ನಡೆಸುತ್ತಿಲ್ಲ. ಇಲ್ಲಿ ಚರ್ಚಿಸುವ ವಿಷಯಗಳನ್ನು ಸಭೆ ನಡೆಯುವ ಒಂದು ದಿನ ಮುಂಚೆ ನೀಡಿದ್ದು, ವಿಷಯ ಗೊತ್ತಿಲ್ಲ. ಅನುದಾನ ಬಳಕೆ ವಿವರ ತಿಳಿಸಿಲ್ಲ. ಆದರೂ ಜಮಾ-ಖರ್ಚಿನ ವಿಷಯ ಕುರಿತು ಚರ್ಚಿಸುವುದು ಹೇಗೆ ? ಈ ಹಿಂದಿನ ಸಭೆಗಳಲ್ಲಿ ಚರ್ಚಿಸಿದ ವಿಷಯಗಳು ಅನುಷ್ಠಾನವಾಗಿಲ್ಲವೆಂದು ಬಿಜೆಪಿ ಸದಸ್ಯರಾದ ಸರ್ವೇಶಗೌಡ, ವಿದ್ಯಾ ಹೆಸರೂರು, ದೇವಕ್ಕ ಕಂದಾರಿ, ರತ್ನಾ ಕುಕನೂರು ಇತರರು ಸಭೆ ಬಹಿಷ್ಕರಿಸಿದರು. ನೀವು ಬೇಡವೆಂದ ವಿಷಯ ಬಿಟ್ಟು, ಉಳಿದಿದ್ದನ್ನು ಚರ್ಚಿಸೋಣ. ಜ.27ರಂದು ಮತ್ತೊಮ್ಮೆ ಸಭೆ ಕರೆದು ಉಳಿದ ವಿಷಯ ಚರ್ಚಿಸೋಣವೆಂದು ನಗರಸಭೆ ಅಧ್ಯಕ್ಷ ಶಿವಗಂಗಾ ಭೂಮಕ್ಕನರ್ ಸದಸ್ಯರ ಮನವೊಲಿಸಿ ಸಭೆ ನಡೆಸಿದರು.
ಸ್ವಚ್ಛ ವಾಹಿನಿ ಚಾಲಕರಿಗೆ ವೇತನ ಇಲ್ಲ: ಸ್ಮಶಾನಕ್ಕೆ ಅನುದಾನ ನೀಡಿದರೂ ಸರಿಯಾಗಿ ಯೋಜನೆ ರೂಪಿಸಿಲ್ಲ. ಸ್ಥಳ ಪರಿಶೀಲನೆ ನಡೆಸಿ ಕುಡಿವ ನೀರು, ಆಸನ, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಳೇ ಪಾಂಡುರಂಗ ಗುಡಿ ಹತ್ತಿರ ರಾಜಕಾಲುವೆ ಒತ್ತುವರಿಯಾಗಿದ್ದು, ತೆರವುಗೊಳಿಸಬೇಕು. ಗದಗ-ಹೊಸಪೇಟೆ ರಸ್ತೆಯಲ್ಲಿನ ಅಕ್ರಮ ಕಟ್ಟಡ ತೆರವು, ವೃತ್ತ ವಿಸ್ತರಣೆ ಮಾಡಬೇಕು. ಸ್ವಚ್ಛ ವಾಹಿನಿ ಚಾಲಕರಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ. ಅವರು ಕೆಲಸ ಬಿಟ್ಟರೆ ಯಾರು ಮಾಡುತ್ತಾರೆಂದು ರಾಜಶೇಖರ್ ಆಡೂರು ಪ್ರಶ್ನಿಸಿದರು. ಅಮ್ಜದ್ ಪಟೇಲ್, ಮುತ್ತು ಕುಷ್ಟಗಿ ದನಿಗೂಡಿಸಿದರು. ಸಭೆ ಬಳಿಕ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಸ್ಮಶಾನಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ರಾಜಕಾಲುವೆ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸುವುದಾಗಿ ಪೌರಾಯುಕ್ತರು ತಿಳಿಸಿದರು.