ವಿವಿಧ ವಿಷಯಗಳ ಆಳ ಅಧ್ಯಯನಕ್ಕೆ ಮುಂದಾಗಿ: ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ

19
Published on

ಮೈಸೂರು: ವಿದ್ಯಾರ್ಥಿಗಳು ವಿವಿಧ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಮಾಡಲು ಮುಂದಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಹೇಳಿದರು.

ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ ಅವರ ವರ್ಷದ ನೆನಪು ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಅಂತರ ಶಿಸ್ತೀಯ ಅಧ್ಯಯನದ ಬಗ್ಗೆ ಮುಂದಾಲೋಚನೆ ಇರಿಸಿಕೊಂಡಿದ್ದ ಮಾದಯ್ಯ ಅವರು ಮಾನಸಗಂಗೋತ್ರಿಯಲ್ಲಿ ಭೌತ, ರಸಾಯನ, ಜೀವ ವಿಜ್ಞಾನ, ಗಣಿತ, ಪರಿಸರ ವಿಜ್ಞಾನ ವಿಭಾಗ ಆರಂಭಿಸಿದರು. ಮಹಿಳಾ ಅಧ್ಯಯನ ಕೂಡ ಇವರ ಕಲ್ಪನೆಯಾಗಿತ್ತು. ಅವರ ಆಶಯದಂತೆ ವಿದ್ಯಾರ್ಥಿಗಳು ಹಲವು ವಿಷಯಗಳ ಬಗ್ಗೆ ಕಲಿಯಬೇಕು ಎಂದರು.

ವಿವಿಯ ಮೂಲ ಉದ್ದೇಶಕ್ಕೆ ಯಾವುದೇ ಚ್ಯುತಿ ಬಾರದಂತೆ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳನ್ನು ಮುಂದಾಲೋಚನೆಯಿಂದ ನಡೆಸಿಕೊಂಡು ಹೋಗುತ್ತಿದ್ದ ಮಾದಯ್ಯ, ತಮ್ಮ ಕಾರ್ಯದ ಮೂಲಕವೇ ವಿಶ್ವ ವಿದ್ಯಾಲಯ ಸ್ಮರಿಸುವಂಥ ಸಾಧನೆ ಮಾಡಿ ಹೋಗಿದ್ದಾರೆ ಎಂದು ಶ್ಲಾಘಿಸಿದರು.

ಮನೆಯಲ್ಲೇ ಬೃಹತ್ ಗ್ರಂಥಾಲಯ: ಮಾದಯ್ಯ ಅವರ ಪತ್ನಿ, ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಇಂದುಮತಿ ಮಾತನಾಡಿ, ಹೆಣ್ಣು ಮಕ್ಕಳು ಹೆಚ್ಚು ಅಧ್ಯಯನ ಮಾಡಬೇಕು ಎಂಬುದು ಮಾದಯ್ಯ ಅವರ ಆಶಯವಾಗಿತ್ತು. ಅವರು ಶ್ರಮಜೀವಿ. ಕಷ್ಟಪಟ್ಟು ಮೇಲೆ ಬಂದಿದ್ದರು. ಸದಾ ಅಧ್ಯಯನಶೀಲರಾಗಿದ್ದ ಅವರು, ಮನೆಯಲ್ಲೇ ಬೃಹತ್ ಗ್ರಂಥಾಲಯವನ್ನೇ ಸ್ಥಾಪಿಸಿದ್ದಾರೆ ಎಂದರು.

ವೇಳೆ ಮೀರಿದ ಸೇವೆ: ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಪ್ರೊ.ಎಂ. ಮಾದಯ್ಯ ಅವರಿಗೆ ವೈಯಕ್ತಿಕ ಕೆಲಸ ಕಾರ್ಯಗಳಿಗಿಂತ ವಿವಿ ಹಾಗೂ ವಿದ್ಯಾರ್ಥಿಗಳ ಏಳಿಗೆಯೇ ಪ್ರಧಾನ ಕಾಳಜಿ ಆಗಿತ್ತು. ಹೀಗಾಗಿ ಸರ್ಕಾರ ನಿಗದಿಪಡಿಸಿದ ಕಚೇರಿ ವೇಳೆಯನ್ನು ಮೀರಿ ಸೇವೆ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಸರ್ವ ವರ್ಗ ಸಮ್ಮತ ನೇಮಕಾತಿ, ಎನ್‌ಎಸ್‌ಎಸ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಸೆನೆಟ್ ಭವನ, ಗಂಗೋತ್ರಿ ಕ್ರೀಡಾಂಗಣ, ಮಂಡ್ಯ, ಹಾಸನ, ಮಹದೇಶ್ವರಬೆಟ್ಟದಲ್ಲಿ ಅಧ್ಯಯನ ಕೇಂದ್ರ ನಿರ್ಮಿಸಿದರು. ವಿವಿ ಕ್ಯಾಂಪಸ್‌ನಲ್ಲಿ ಸುಮಾರು 50 ಸಾವಿರ ಗಿಡ ನೆಡಿಸಿದರು ಎಂದು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಖ್ಯಾತ ಆರ್ಥಿಕ ತಜ್ಞರೂ ಆಗಿದ್ದ ಪ್ರೊ.ಎಂ. ಮಾದಯ್ಯ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರ ಆಪ್ತ ಸ್ನೇಹಿತರಾಗಿದ್ದರು. ಅವರು ಕುಲಪತಿಯಾಗಿದ್ದ ಅವಧಿಯಲ್ಲಿಯೇ ಡಾ.ಮನಮೋಹನ್ ಸಿಂಗ್ ಅವರು ಘಟಿಕೋತ್ಸವದಲ್ಲೂ ಭಾಗಿಯಾಗಿದ್ದರು. ಅವರಿಗೆ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು ಎಂದರು.

ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಕನ್ನಡ ಉಪನ್ಯಾಸಕಿ ಸಂಧ್ಯಾರಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net