

ಕಳಸ: ಸಮವಸರಣ ಪೂಜೆಯಲ್ಲಿ ಭಾಗಿಯಾಗಿ ನಮ್ಮಲ್ಲಿರುವ ಅಹಂಕಾರ, ದುರ್ಬುದ್ಧಿಗಳನ್ನು ಕಳಚಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗಲು ಇದು ಸೂಕ್ತ ಸಂದರ್ಭ ಎಂದು ಧರ್ಮಸ್ಥಳ ಧರ್ಮಾಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕಳಸದ ಶ್ರೀ ಚಂದ್ರನಾಥ ಬಸದಿಯ ಪಂಚ ಕಲ್ಯಾಣ ಮಹೋತ್ಸವದ ನಾಲ್ಕನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಅನೇಕ ಕರ್ಮಗಳನ್ನು ಸಂಗ್ರಹ ಮಾಡುತ್ತೇವೆ ಇಂತಹ ಸಂದರ್ಭದಲ್ಲಿ ಅದನ್ನು ನಾಶಪಡಿಸಿಕೊಳ್ಳ ಬೇಕು. ನಾವು ಎಲ್ಲರೊಂದಿಗೆ ಬೆರೆತು ಅಹಂಕಾರ ಮರೆತು ನಮ್ಮ ಘನತೆ ಹೆಚ್ಚಿಸಿಕೊಳ್ಳಬೇಕು. ಕಳಸದಲ್ಲಿ ಇಂತಹ ಒಂದು ಭವ್ಯವಾದ ಬಸದಿ ನಿರ್ಮಾಣವಾಗಲು ಇಲ್ಲಿಯ ಜೈನರ ಒಗ್ಗಟ್ಟು, ಶ್ರದ್ದೆ, ಮತ್ತು ಧಾರ್ಮಿಕ ನಂಬಿಕೆ ಕಾರಣ ಎಂದು ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಕಳಸ ಸುತ್ತಮುತ್ತ ಸಾಕಷ್ಟು ಬಸದಿಗಳಿವೆ. ಇದು ಜೈನ ಕಾಶಿಯಾಗಿ ಇಲ್ಲಿ ಬಾಹುಬಲಿಯನ್ನು ಪ್ರತಿಷ್ಠಾಪಿಸುವ ಯೋಗ ಬರಲಿ. ಅಹಿಂಸಾ ಪರಮೋ ಧರ್ಮ ಎಂದು ವಿಶ್ವಕ್ಕೆ ತೋರಿಸಿಕೊಟ್ಟ ಧರ್ಮ ಅದು ಜೈನ ಧರ್ಮ. ಅಹಿಂಸಾ ಪರಮೋ ಧರ್ಮ ಬಾರತದ ಸ್ವಾತಂತ್ರ್ಯಕ್ಕೂ ಕೂಡ ಕಾರಣವಾಗಿದೆ ಎಂದರು.
ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಆತ್ಮಶುದ್ಧಿ, ಜೀವನ ಶುದ್ಧಿ ಕಂಡುಕೊಳ್ಳಬೇಕು. ಆಗ ನಾವು ಹೊಸ ಜೀವನಕ್ಕೆ ಸಮರ್ಪಣೆ ಮಾಡಿಕೊಳ್ಳುವ ವ್ಯವಸ್ಥೆಗೆ ಕಾರಣವಾಗುತ್ತದೆ. ಮನುಷ್ಯನ ಏಳಿಗೆ ಅವನ ಕರ್ಮ, ಸಿದ್ಧಾಂತದ ಮೇಲೆ ಅವಲಂಬಿತವಾಗಿದೆ. ಈ ಕರ್ಮ, ಸಿದ್ಧಾಂತ ಧರ್ಮ ಸಿದ್ದಾಂತದ ಮೇಲೆ ಅವಲಂಬಿತವಾಗಿದೆ. ಆ ಧರ್ಮ ಸಿದ್ಧಾಂತವನ್ನು ಅನುಭವಿಸಿ ಅಳವಡಿಸಿ ಜೀವನದ ಸಾಕ್ಷಾತ್ಕಾರ ಮಾಡಿಕೊಳ್ಳಬೇಕಾದರೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು. ನಮ್ಮ ಬದುಕು ಪ್ರದರ್ಶನದ ಬದುಕಾಗದೇ ನಿದರ್ಶನದ ಬದುಕಾಗಬೇಕು ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರಯ್ಯ, ನಿವೃತ್ತ ಉಪನ್ಯಾಸಕ ಮುನಿರಾಜ ರೆಂಜಾಳ ಇದ್ದರು.