

ದಾಬಸ್‌ಪೇಟೆ: ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರಾಗಿ ಬೆಳೆಗೆ ಯೂರಿಯಾ ಖರೀದಿಸಲು ರೈತರು ರಸಗೊಬ್ಬರದ ಅಂಗಡಿ ಮುಂದೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಯೂರಿಯಾ ಖರೀದಿಸಲು ಬಯಸುವ ಪ್ರತಿ ರೈತರಿಗೆ ರಸಗೊಬ್ಬರದ ಅಂಗಡಿಯಲ್ಲಿ ಚೀಟಿ ಕೊಡಲಾಗುತ್ತಿದೆ. ಈ ಚೀಟಿ ಪಡೆಯಲು ರೈತರು ಪಡಿಪಾಟಲುಪಡುತ್ತಿದ್ದಾರೆ. ಮುಂಜಾನೆ 5 ಗಂಟೆಯಿಂದಲೇ ರಸಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಶುಕ್ರವಾರ ಕೂಡ ಗೊಬ್ಬರದ ಚೀಟಿ ಪಡೆಯಲು 350ಕ್ಕೂ ಹೆಚ್ಚು ರೈತರು ಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಆದರೆ, ದಾಸ್ತಾನು ಕಡಿಮೆ ಇರುವುದರಿಂದ ತಮಗೆ ಯೂರಿಯಾ ಸಿಗುತ್ತದೋ ಇಲ್ಲವೋ ಎಂಬ ಭಯದಲ್ಲಿ ದೈಹಿಕ ಅಂತರ ಮರೆತು ಒಬ್ಬರ ಮೇಲೊಬ್ಬರು ಬೀಳುತ್ತಿದ್ದ ದೃಶ್ಯ ಕಂಡು ಬಂತು.
ಚೀಟಿ ಸಿಕ್ಕವರು ಲಾರಿಗಳಿಂದಲೇ ನೇರವಾಗಿ ಚೀಲ ಪಡೆದು ಟ್ರ್ಯಾಕ್ಟರ್ ಮತ್ತಿತರ ವಾಹನಗಳಿಗೆ ತುಂಬಿಕೊಂಡು ಹೋಗುತ್ತಿದ್ದಾರೆ. ಸಿಗದವರು ಇನ್ನೂ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಒಬ್ಬರಿಗೆ ಒಂದೇ ಚೀಲ: ಆರಂಭದಲ್ಲಿ ರೈತರು ಕೇಳಿದಷ್ಟು ಯೂರಿಯಾವನ್ನು ಕೊಡಲಾಗುತ್ತಿತ್ತು. ಆದರೆ, ಬೇಡಿಕೆ ಹೆಚ್ಚಾಗುತ್ತಿರುವಂತೆ ದಾಸ್ತಾನು ಕೂಡ ಕಡಿಮೆಯಾಗಲಾರಂಭಿಸಿತು. ಇದರಿಂದಾಗಿ ಪ್ರತಿ ರೈತರಿಗೆ ಒಂದು ಚೀಲ ಮಾತ್ರ ಕೊಡಲಾಗುತ್ತಿದೆ. ಹೀಗಾಗಿ ದೈಹಿಕ ಅಂತರ ಮರೆತು ರೈತರು ಯೂರಿಯಾ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಸರಕು ಸಾಗಣೆ ವಾಹನಗಳ ಸಮಸ್ಯೆಯಿಂದ ಯೂರಿಯಾ ಬರುತ್ತಿಲ್ಲ. ಆಧಾರ್‌ಕಾರ್ಡ್ ನೋಡಿಕೊಂಡು ವಿತರಿಸಲು ಸೂಚಿಸಲಾಗಿದೆ. ಯೂರಿಯಾವನ್ನು ಕೇವಲ ಮೇಲು ಗೊಬ್ಬರವಾಗಿ ಬಳಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಬಳಸಿದರೆ, ಬೆಳೆಗಳಿಗೆ ರೋಗ ಅಥವಾ ಕೀಟಬಾಧೆ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಕೆ. ಕುಮಾರ್, ಸೋಂಪುರ ಕೃಷಿ ಇಲಾಖೆ ಅಧಿಕಾರಿ