ಭೋಗಜೀವನಕ್ಕಾಗಿ ನೈತಿಕ ಮೌಲ್ಯ ಮರೆಯದಿರಿ

Shridevi Education Avadhuta Gattahalli Sri Anjanappa Swamygala Sridevi Ramana Maharshi Award Photos 03
ತುಮಕೂರಿನ ಶ್ರೀದೇವಿ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀದೇವಿ ರಮಣ ಮಹರ್ಷಿ ಪುರಸ್ಕಾರ-&2025, ಡಾ.ಕೆ.ಆರ್​.ಕಮಲೇಶ್​ ಅವರು ರಚಿಸಿರುವ ಗಟ್ಟಹಳ್ಳಿ ಶ್ರೀ ಆಂಜನಪ್ಪ ಸ್ವಾಮಿಗಳು ಮತ್ತು ಅವರ ಪರಂಪರೆ ಗ್ರಂಥ ಬಿಡುಗಡೆ ಸಮಾರಂಭದಲ್ಲ್ಲಿ ಶ್ರೀಯೋಗೀಶ್ವರಾನಂದ ಸ್ವಾಮೀಜಿ, ಡಿ.ಡಿ.ಮಾಳಗಿ, ಮಾಜಿ ಸಚಿವ ರೇವಣ್ಣ, ಡಾ.ಜಯಮ್ಮ, ಎಂ.ಎಸ್​.ಪಾಟೀಲ್​ ಇದ್ದರು.
Published on

ಶ್ರೀ ಯೋಗೀಶ್ವರಾನಂದ ಮಹಾಸ್ವಾಮೀಜಿ ಸಲಹೆ- ಶ್ರೀದೇವಿ ರಮಣ ಮಹರ್ಷಿ ಪುರಸ್ಕಾರ

ತುಮಕೂರು: ಶಿಕ್ಷಕರು, ವೈದ್ಯರು, ನೈತಿಕ ಮಾರ್ಗದಲ್ಲಿ ನಡೆದರೆ ಅಂತಹ ಸಮಾಜವನ್ನು ಯಾರಿಂದಲೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ರಾಮೋಹಳ್ಳಿ ಕೆಂಗೇರಿಯ ರಾಮಕೃಷ್ಣ ಯೋಗಾಶ್ರಮದ ಶ್ರೀ ಯೋಗೀಶ್ವರಾನಂದ ಸ್ವಾಮೀಜಿ ಹೇಳಿದರು.

ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀದೇವಿ ರಮಣ ಮಹರ್ಷಿ ಪುರಸ್ಕಾರ-&2025, ಡಾ.ಕೆ.ಆರ್​.ಕಮಲೇಶ್​ ಅವರು ರಚಿಸಿರುವ ಗಟ್ಟಹಳ್ಳಿ ಶ್ರೀ ಆಂಜನಪ್ಪಸ್ವಾಮಿಗಳು ಮತ್ತು ಅವರ ಪರಂಪರೆ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ನೈತಿಕ ಮೌಲ್ಯ ಬಿಟ್ಟು ಭೋಗಜೀವನಕ್ಕೆ ಜೋತು ಬಿದ್ದ ಕಾರಣ ಭಾರತಕ್ಕೆ ಕಡುಭ್ರಷ್ಟ ದೇಶ ಎಂಬ ಕಳಂಕ ಅಂಟಿಸಿಕೊಂಡಿದೆ. ಈ ದೇಶದ ಅನೇಕ ಸಾಧು ಸಂತರು, ಮಹಾನ್​ ಸಾಧಕರು ಶಾಲೆ ಮೆಟ್ಟಿಲು ಹತ್ತದ ಅವಿದ್ಯಾವಂತರೆ ಆಗಿದ್ದಾರೆ. ಇದು ನಿಜವಾದ ಭಾರತದ ಶಕ್ತಿಯ ಅನಾವರಣವನ್ನು ತೋರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖ ಇರುತ್ತದೆ. ಆದರೆ ಅಂತರಂಗದ ಸೊಗಡು ವ್ಯಕ್ತಿತ್ವವನ್ನು ಬಹಳ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂಬುದಕ್ಕೆ ಗಟ್ಟಹಳ್ಳಿ ಶ್ರೀ ಆಂಜನಪ್ಪಸ್ವಾಮಿ ಅವರ ಬದುಕೇ ಉತ್ತಮ ಉದಾಹರಣೆ ಎಂದು ತಿಳಿಸಿದರು.

ನಿವೃತ್ತ ಡಿವೈಎಸ್​ಪಿ ಮತ್ತು ಹುಬ್ಬಳ್ಳಿ ಶ್ರೀಸಿದ್ದರೂಢ ಮಠದ ನಿಕಟ ಪೂರ್ವ ಅಧ್ಯಕ್ಷ ಡಿ.ಡಿ.ಮಾಳಗಿ ಮಾತನಾಡಿ, ರಾಮಕೃಷ್ಣ ಪರಮಹಂಸರನ್ನು ಸ್ವಾಮಿ ವಿವೇಕಾನಂದ ಜಗತ್ತಿಗೆ ಪರಿಚಯಿಸಿದರೆ ಗುಪ್ತಗಾಮಿನಿಯಾಗಿ, ಎಲೆಮರೆಕಾಯಿ ಆಗಿದ್ದ ಗಟ್ಟಹಳ್ಳಿ ಶ್ರೀಅಂಜನಪ್ಪಸ್ವಾಮಿ ಅವರನ್ನು ನಾಡಿನ ಆಧ್ಯಾತ್ಮ ಜಗತ್ತಿಗೆ ಪರಿಚಯಿಸಿದವರು ಬಿ.ಪಿ.ರೇವಣ್ಣ. ಅವರು ಭಕ್ತರಾಗಿ, ಶಿಷ್ಯರಾಗಿ, ಕೊನೆಯ ತನಕ ಅವರ ಸೇವೆ ಮಾಡಿದರು ಎಂದು ತಿಳಿಸಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್​.ಎಂ.ರೇವಣ್ಣ ಮಾತನಾಡಿ, ಗಟ್ಟಹಳ್ಳಿ ಶ್ರೀಅಂಜನಪ್ಪಸ್ವಾಮಿಗಳ ಆಶ್ರಮದ ಜಾಗವನ್ನು ಕಬಳಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿ ಪ್ರಯತ್ನಿಸುತ್ತಿದ್ದು, ಇದನ್ನು ಆಶ್ರಮದ ಆಸ್ತಿಯಾಗಿ ಉಳಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ. ಇದರ ಜತೆಗೆ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯನ್ನು ಖಾಸಗಿ ವಿಶ್ವವಿದ್ಯಾಲಯವನ್ನಾಗಿ ಮಾಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್​.ಹುಲಿನಾಯ್ಕರ್​ ಮಾತನಾಡಿ, ಉತ್ತಮ ಸಮಾಜ, ಆರೋಗ್ಯ, ವಿಚಾರಧಾರೆಗಳು, ಗುರು ಪರಂಪರೆಯ ಸಂದೇಶಗಳು ಆಧ್ಯಾತ್ಮದ ಮೂಲಕ ಪ್ರಸಾರವಾಗಬೇಕು ಎಂದು ಹೇಳಿದರು.

ಡಿ.ಡಿ.ಮಾಳಗಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಹಾಗೂ 2025ನೇ ಸಾಲಿನ ಶ್ರೀದೇವಿ ರಮಣ ಮಹರ್ಷಿ ಪ್ರಶಸ್ತಿ ಪುರಸತರಾದ ಡಾ.ಬಿ.ಆರ್​.ಜಯಮ್ಮ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೃತಿಯ ರಚನೆಕಾರ ಡಾ.ಕೆ.ಆರ್​.ಕಮಲೇಶ್​ ಮತ್ತು ಲೇಖಕಿ ಭಾರತಿ ದಂಪತಿಯನ್ನು ಗೌರವಿಸಸಲಾಯಿತು.

ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶ್ರೀದುರ್ಗಾಂಬಿಕಾ ದೇವಸ್ಥಾನದ ಮಾನ್ಯೇಜಿಂಗ್​ ಟ್ರಸ್ಟಿ ಶಾಂತಾದುರ್ಗಾದೇವಿ ಹುಲಿನಾಯ್ಕರ್​, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಶ್ರೀದೇವಿ ಚಾರಿಟಬಲ್​ ಟ್ರಸ್ಟ್​ನ ಟ್ರಸ್ಟಿ ಡಾ.ಲಾವಣ್ಯ, ಡಾ.ರಮಣ್​ ಎಂ.ಹುಲಿನಾಯ್ಕರ್​, ಶ್ರೀದೇವಿ ಇಂಜಿನಿಯರಿಂಗ್​ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರವಿಶ್ವನಾಥ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net