

ನರೇಗಲ್ಲ: ಪರಶಿವನ ಅವತಾರವೇ ಆದ ಶ್ರೀ ವೀರಪ್ಪಜ್ಜನವರು ಕೋಡಿಕೊಪ್ಪದಲ್ಲಿ ಜನಿಸಿದರು. ಇಂತಹ ಮಹಾಮಹಿನ ಜನ್ಮ ಕ್ಷೇತ್ರದಲ್ಲಿ ಜೀವಿಸುವವರು ಪುಣ್ಯವಂತರು ಎಂದು ಮುಂಡರಗಿಯ ನಾಡೋಜ ಜಗದ್ಗುರು ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಪುಣ್ಯಾರಾಧನೆ ಶತಮಾನೋತ್ಸವ ನಿಮಿತ್ತ ಗುರುವಾರ ಏರ್ಪಡಿಸಿದ್ದ ಶ್ರೀ ವೀರಪ್ಪಜ್ಜನವರ ಜೀವನ ದರ್ಶನ ಪುರಾಣ ಪ್ರವಚನದ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಾವು ಬೇರೆಯವರಿಗೆ ಮಾಡಿದ ಉಪಕಾರವನ್ನು, ಬೇರೆಯವರಿಂದ ನಮಗಾದ ಅಪಕಾರವನ್ನು ಮರೆಯಬೇಕು ಎಂದರು.
ಮಲ್ಲಸಮುದ್ರ-ಓಂಕಾರಗಿರಿ ಹಿರೇಮಠದ ಫಕೀರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇದನ್ನೇ ಶ್ರೀ ವೀರಪ್ಪಜ್ಜನವರು ತಮ್ಮ ವೇದ ವಾಕ್ಯದಲ್ಲಿ ತಿಳಿಸಿದ್ದಾರೆ. ಇದನ್ನು ಅರ್ಥಮಾಡಿಕೊಂಡವರು ಜೀವನದಲ್ಲಿ ಗೆದ್ದಂತೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕಪೋತಗಿರಿಯ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ವೀರಪ್ಪಜ್ಜನವರು ಹುಚ್ಚರಲ್ಲ. ಅವರನ್ನು ಹುಚ್ಚರೆಂದು ಕರೆಯುತ್ತಿರುವ ನಾವುಗಳು ಹುಚ್ಚರು. ಸಂಸಾರದ ಹಿಂದೆ ಬಿದ್ದು ಅಧ್ಯಾತ್ಮವನ್ನೇ ಮರೆತು ಬಾಳುತ್ತಿರುವ ನಾವು ಮೂಢರು. ಪುರಾಣ ಶ್ರವಣದಿಂದ ಜ್ಞಾನ ಸಿಗುತ್ತದೆ ಎಂದರು.
ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಸ್ವಾಮೀಜಿ ಪುರಾಣ ಪ್ರಾರಂಭಿಸಿದರು. ಚಿಕ್ಕಮನ್ನಾಪುರದ ಹನುಮಂತ ಮೇಟಿ ಸಂಗೀತ ಮತ್ತು ಬರದೂರಿನ ಶಾಂತಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಪುಣ್ಯಾರಾಧನೆ ಶತಮಾನೋತ್ಸವಕ್ಕೆ ದಾನ ನೀಡಿದವರನ್ನು ಸನ್ಮಾನಿಸಲಾಯಿತು. ರವಿ ದಂಡಿನ ಮಾತನಾಡಿದರು. ಕುಕನೂರಿನ ಗುದ್ನೆಪ್ಪ ಮಠದ ಸ್ವಾಮೀಜಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಎಂ.ಸಿ. ಚಪ್ಪನ್ನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಇದ್ದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯ ಬಿ. ಆರ್. ಜಾಲಿಹಾಳ ಸ್ವಾಗತಿಸಿದರು.
ಹೋಮಗಳಿಂದ ಶಾಂತಿ ಪ್ರಾಪ್ತಿ: ಸನಾತನ ಧರ್ಮದಲ್ಲಿ ಹೋಮಗಳಿಂದಾಗಿ ಮನುಷ್ಯರು ನೆಮ್ಮದಿಯಿಂದ ಬದುಕುತ್ತಿದ್ದರು. ಇಂದಿಗೂ ಆ ಪರಂಪರೆ ಮುಂದುವರಿದಿದೆ ಎಂದು ಮಲ್ಲಸಮುದ್ರ-ಓಂಕಾರಗಿರಿ ಹಿರೇಮಠದ ಫಕೀರೇಶ್ವರ ಪಟ್ಟಾಧ್ಯಕ್ಷರು ಹೇಳಿದರು.
ಕೋಡಿಕೊಪ್ಪದ ಶ್ರೀಮಠದಲ್ಲಿ ಗುರುವಾರ ಹೋಮ ಕಾರ್ಯ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ‘ಹೋಮಗಳ ಮೂಲಕ ಅರ್ಪಿಸುವ ಹವಿಸ್ಸು ಭಗವಂತನಿಗೆ ಸಮರ್ಪಣೆಯಾಗುತ್ತದೆ. ಯಾವ ದೇವನನ್ನು ಸ್ಮರಿಸಿ ನಾವು ಹೋಮ ಮಾಡುತ್ತೇವೆಯೋ ಆ ದೇವರು ಸಂತೃಪ್ತನಾಗಿ ಒಲಿದು ನಮ್ಮ ಬೇಡಿಕೆಗಳಿಗೆ ಅಸ್ತು ಎನ್ನುತ್ತಾನೆ. ಅದಕ್ಕಾಗಿ ನಾವು ಶುದ್ಧ ಮತ್ತು ನಿರ್ಮಲ ಮನದಿಂದ ಹೋಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಪಂ. ಗುರುಸಿದ್ದಯ್ಯಸ್ವಾಮಿ ಹಿರೇಮಠ ಪೌರೋಹಿತ್ಯ ವಹಿಸಿದ್ದರು. ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ದಂಪತಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ. ಮಲ್ಲಯ್ಯ ಚಪ್ಪನ್ನಮಠ ಇತರರಿದ್ದರು.