

ಕೂಡ್ಲಿಗಿ: ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ ಮೃತಪಟ್ಟವರ ಹೆಸರಿನಲ್ಲಿ ಬೇರೆಯವರನ್ನು ಕರೆ ತಂದು ನೋಂದಣಿ ಮಾಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ತಹಸೀಲ್ದಾರ್ ಎಂ.ವಿ.ನೇತ್ರಾವತಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ್ ಮಾತನಾಡಿ, ಬಡೇಲಡಕು ಗ್ರಾಮದಲ್ಲಿ ಸರ್ವೇ ನಂಬರ್ 70/ಸಿ ಯಲ್ಲಿ 4.90 ಎಕರೆ ಜಮೀನಿನ ಮೂಲ ವಾರಸುದಾರ ಭದ್ರಶೆಟ್ಟಿ ಶಾಂತ ವೀರಪ್ಪನ ಮಗ ಅಜ್ಜಪ್ಪ ಮರಣ ಹೊಂದಿದ್ದಾರೆ. ಆದರೆ, ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಮೃತರ ಹೆಸರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಲಾಗಿದೆ ಎಂದು ದೂರಿದರು.
ಉಪ ನೋಂದಣಿ ಕಚೇರಿ ಪತ್ರ ಬರಹಗಾರರು ಮೃತರ ಪಹಣಿಗಳನ್ನು ಹುಡುಕಿ ಹಣದಾಸೆಗೆ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿ ನೋಂದಣಿ ಮಾಡಿಸುತ್ತಿದ್ದಾರೆ. ನೋಂದಣಿ ಸಮಯದಲ್ಲಿ ಕಡತಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ವಾರಸುದಾರರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಪತ್ರಬರಹಗಾರರ ಪರವಾನಗಿ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.