

ಮದ್ದೂರು : ಪಟ್ಟಣಕ್ಕೆ ದಾಳಿ ಇಟ್ಟ ಕಾಡಾನೆಗಳ ಹಿಂಡು ಕಾಡಿಗೆ ತೆರಳದೆ ಶಿಂಷಾ ನದಿ ಪಾತ್ರದಲ್ಲೇ ಬೀಡುಬಿಟ್ಟಿವೆೆ. ಸೋಮವಾರ ಮುಂಜಾನೆ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ದೇವಾಲಯದ ಮುಂದಿರುವ ಶಿಂಷಾ ನದಿ ಪಾತ್ರದಲ್ಲಿ 6 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದವು. ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅಥವಾ ಕುರನಗೆರೆ ಅರಣ್ಯ ಪ್ರದೇಶದಿಂದ ಮದ್ದೂರು ತಾಲೂಕಿಗೆ ಆಹಾರ ಮತ್ತು ಮೇವು ಅರಸಿ ಬಂದಿದ್ದವು.
ಅರಣ್ಯ ಸಿಬ್ಬಂದಿ ಸೋಮವಾರ ಸ್ಥಳದಲ್ಲಿ ಮೊಕ್ಕಾಂ ಹೂಡಿ ಆನೆಗಳನ್ನು ಸಂಜೆ 6 ಗಂಟೆಯ ನಂತರ ಕಾಡಿನತ್ತ ಓಡಿಸಲು ಪ್ರಯತ್ನಪಟ್ಟರು. ಆದರೆ ಕಾಡಾನೆಗಳು ಕಾಡಿಗೆ ತರಳಲಿಲ್ಲ. ಮಂಗಳವಾರ ಗೆಜ್ಜಲಗೆರೆ ವ್ಯಾಪ್ತಿಯಲ್ಲಿ ಸಂಚಾರ ಮಾಡಿ ನೀಲಕಂಠನಹಳ್ಳಿ ಗ್ರಾಮದ ಶಿಂಷಾನದಿ ಪಾತ್ರದಲ್ಲಿ ಬೀಡುಬಿಟ್ಟಿವೆ. ಸಂಜೆ ವೇಳೆಗೆ ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಮಂಗಳವಾರವೂ ಭತ್ತ, ಕಬ್ಬು, ತೆಂಗು ಹಾಗೂ ಬಾಳೆ ಬೆಳೆ ಸೇರಿದಂತೆ ವಿವಿಧ ಬೆಳೆ ತಿಂದು, ತುಳಿದು ಹಾಳು ಮಾಡಿವೆ. ತಾಲೂಕು ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು, ಅಧಿಕಾರಿಗಳಾದ ಶರಣ್, ರಾಘವೇಂದ್ರ, ಶೈಲೇಶ್ ಸೇರಿದಂತೆ ಮಂಡ್ಯದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಆನೆಗಳು ಬೀಡು ಬಿಟ್ಟಿರುವ ಜಾಗದಲ್ಲಿ ಮೊಕ್ಕಾಂ ಹೂಡಿದ್ದು, ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದಾರೆ.