ಬರಗಾಲಕ್ಕೆ ಅರಣ್ಯವೇ ಸೂಕ್ತ ಉತ್ತರ

CLK SCHOOL 11
Published on

ಚಳ್ಳಕೆರೆ: ಬರಗಾಲದ ಪರಿಸ್ಥಿತಿ ಮತ್ತು ಮಳೆಯ ಕೊರತೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅರಣ್ಯೀಕರಣವೇ ಸೂಕ್ತ ಉತ್ತರ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ಕೆಂಚವೀರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ದೂರದೃಷ್ಟಿ ಚಿಂತನೆಯಡಿ ಈ ಕಾರ್ಯಕ್ರಮ ಜಾರಿಗೊಳಿಸಿದ್ದು, ಇದರ ಯಶಸ್ಸಿಗೆ ಪರಿಣಾಮಗಾರಿ ಅನುಷ್ಠಾನ ಅಗತ್ಯ ಎಂದರು.

ಮನುಷ್ಯನ ಸ್ವಾರ್ಥಕ್ಕೆ ಅರಣ್ಯ ಗಿಡ-ಮರಗಳು ನಾಶವಾಗುತ್ತಿವೆ. ಇದರಿಂದ ಬರಗಾಲದ ಪರಿಸ್ಥಿತಿ ಎದುರಾಗುತ್ತಿದೆ. ಸಮಾಜದಲ್ಲಿನ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ಮಳೆ-ಬೆಳೆಗೆ ಹಸಿರೀಕರಣ ಅಗತ್ಯವಾಗಿದೆ. ಈ ವಾಸ್ತವ ಸತ್ಯ ಅರಿವು ಮರ-ಗಿಡಗಳನ್ನು ರಕ್ಷಿಸುವ ಜತೆಗೆ ನೆಟ್ಟು ಪೋಷಿಸುವ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

ಬಿಇಒ ಕೆ.ಎಸ್.ಸುರೇಶ್ ಮಾತನಾಡಿ, ಸಸ್ಯ ಶ್ಯಾಮಲ ಕಾರ್ಯಕ್ರಮ ಅನುಷ್ಠಾನ ಮಾಡಲು ನೀರು ಮತ್ತು ಕಾಂಪೌಂಡ್ ವ್ಯವಸ್ಥೆ ಇರುವ 170 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಶಾಲೆಯಲ್ಲಿ 15ರಿಂದ 20 ಗಿಡಗಳನ್ನು ಬೆಳೆಸುವ ಮೂಲಕ ಹಸಿರೀಕರಣಗೊಳಿಸಬೇಕು ಎಂದರು.

ಗ್ರಾಪಂ ಸದಸ್ಯರಾದ ದೇವರಾಜ, ತಿಪ್ಪಮ್ಮ, ಶಾಲಾ ಸಮಿತಿ ಅಧ್ಯಕ್ಷ ಕೆ.ಟಿ.ಸಂಪತ್‌ಕುಮಾರ್, ಮುಖ್ಯಶಿಕ್ಷಕ ಬಿ.ಜಿ. ನಾಗರಾಜ್, ವಲಯ ಅರಣ್ಯ ಅಧಿಕಾರಿ ಎಸ್. ಬಾಬು, ಸಿಆರ್‌ಪಿ ಆರ್. ರಾಧಾ, ಸಹಶಿಕ್ಷಕರಾದ ಎನ್.ಮಲ್ಲೇಶಪ್ಪ, ಎಂ.ಪಿ.ರಾಜಶೇಖರ್, ಟಿ. ಬಸವರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net