

ಮಂಡ್ಯ: ರಾಜ್ಯದಲ್ಲಿ ಪರಿಸರ ಅಸಮತೋಲನದಿಂದ ಹಲವು ಪ್ರಾಕೃತಿಕ ವಿಪತ್ತು ಸಂಭವಿಸುತ್ತಿದೆ. ಇವುಗಳನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ವಹಿಸಬೇಕು. ವಿಶೇಷವಾಗಿ ಅರಣ್ಯ ಕೃಷಿ ಮಾಡಲು ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಎಂಎಲ್‌ಸಿ, ಮಳೆಗಾಲ ಬಂತೆಂದರೆ ಸಾಕು ಅನೇಕ ಅನಾಹುತಗಳನ್ನು ನೋಡುತ್ತಿದ್ದೇವೆ. ಪ್ರಕೃತಿ ವಿಕೋಪದ ಮುಂದೆ ಮನುಷ್ಯ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇವೆ. ಸರ್ಕಾರ ಸಹ ಸೂಕ್ತ ಸಮಯಕ್ಕೆ ಧಾವಿಸುತ್ತಿದೆಯಾದರೂ ಸಂಭವನೀಯ ಅನಾಹುತಗಳನ್ನು ತಡೆಯಲು ಕಷ್ಟವಾಗುತ್ತಿದೆ. ಇದಕ್ಕೆ ಕಾರಣ, ಮಾನವರೇ ಮಾಡಿಕೊಂಡಿರುವ ಕೆಲವು ಎಡವಟ್ಟುಗಳು ಎಂಬುದು ಸತ್ಯ. ಪ್ರವಾಸೋದ್ಯಮದ ಹೆಸರಿನಲ್ಲಿಯೂ ನಾವು ಅರಣ್ಯ ನಾಶವನ್ನು ನೋಡುತ್ತಿದ್ದೇವೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆಗಳು, ಕ್ರೀಡಾ ವಿರಾಮ ಸ್ಥಳಗಳು, ರೆಸಾರ್ಟ್‌ಗಳು, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಕಾಡು, ಗುಡ್ಡಗಳನ್ನು ಕಡಿಯಲಾಗುತ್ತಿದೆ. ಅರಣ್ಯ ಪ್ರದೇಶ, ನದಿತೀರಗಳ ಪ್ರದೇಶಗಳಲ್ಲಿ ರಸ್ತೆ, ಸೇತುವೆ, ನದಿಗಳ ಪಕ್ಕ ಕೈಗಾರಿಕೆಗಳು, ಅರಣ್ಯದಂಚಿನಲ್ಲಿ ಗಣಿಗಾರಿಕೆ ಹೀಗೆ ಅಭಿವೃದ್ಧಿ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತು ನಿರಂತರವಾಗಿ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿಸರ್ಗದ ಮೇಲೆ ಮಾನವನಿಂದ ಆಗುತ್ತಿರುವ ವಿವಿಧ ಘೋರ ಕೃತ್ಯಗಳಿಂದ ಸಮಾಜದ ಹಲವಾರು ಕ್ಷೇತ್ರಗಳ ಜೊತೆಗೆ ಆರ್ಥಿಕತೆಯ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಸಂಪತ್ತು ನಿರಂತರವಾಗಿ ನಾಶವಾಗುತ್ತಿರುವುದನ್ನು ಗಮನಿಸಿದರೆ ಮುಂದಿನ ಯುವ ಪೀಳಿಗೆಗೆ ಆನ್‌ಲೈನ್‌ನಲ್ಲಿಯೇ ಪ್ರಕೃತಿ ಸೌಂದರ್ಯವನ್ನು ತೋರಿಸಬೇಕಾದ ಪರಿಸ್ಥಿತಿ ಬಂದೊದುಗುತ್ತದೆ. ಮಾತ್ರವಲ್ಲದೆ ಕಾಡುಗಳ ನಾಶ ಎಷ್ಟಾಗಿವೆ ಎಂದರೆ ಹೆದ್ದಾರಿಗಳ ಸಹಿತ ನಾಡಿಗೆ ಅರಣ್ಯ ಪ್ರದೇಶದಿಂದ ಕಾಡುಪ್ರಾಣಿಗಳು ಬರುತ್ತಿರುವುದನ್ನು ನಾವು ನಿತ್ಯವೂ ನೋಡಬಹುದಾಗಿದೆ. ಇದರಿಂದ ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ನಾಂದಿ ಹಾಡಿದಂತಾಗಿದೆ. ಆದ್ದರಿಂದ ಅರಣ್ಯ ಪ್ರದೇಶಗಳ ಅಭಿವೃದ್ಧಿ ಜತೆಗೆ ಸಸ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆಡುವ ಮೂಲಕ ಸಸ್ಯ, ಪ್ರಾಣಿ, ಪಕ್ಷಿಗಳ ಸಂಕುಲಗಳ ಸುರಕ್ಷತೆಗಾಗಿ ಸಾರ್ವಜನಿಕರು ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ನಿಸರ್ಗ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ. ಅರಣ್ಯ ನಾಶ ಮಾಡುವವರ ವಿರುದ್ಧ ಸರ್ಕಾರವು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಲ್ಲು ಗಣಿಗಾರಿಕೆಗೆ ಮುಂತಾದ ಕಾರ್ಯಗಳಿಗೆ ಅನುಮತಿ ನೀಡಿದಾಗ ಅದಕ್ಕೆ ಪರ್ಯಾಯವಾಗಿ ಅರಣ್ಯ ಬೆಳೆಸಲು ಇನ್ನಷ್ಟು ಹೆಚ್ಚಿನ ಕ್ರಮ ವಹಿಸಬೇಕಿದೆ. ರಸ್ತೆ ನಿರ್ಮಾಣದಿಂದ ಉಂಟಾಗುವ ಮರಗಳ ನಾಶಕ್ಕೆ ಪರ್ಯಾಯವಾಗಿ ಕಡ್ಡಾಯವಾಗಿ ಗಿಡನೆಟ್ಟು ಬೆಳೆಸುವ ಕಾರ್ಯವಾಗಬೇಕಿದೆ. ನೀರಾವರಿ ಯೋಜನೆಗಳ ಸಂದರ್ಭದಲ್ಲಿ ನಾಶವಾಗುವ ಪ್ರಕೃತಿ ಸಂಪತ್ತನ್ನು ಪರ್ಯಾಯವಾಗಿ ಬೆಳೆಸಲು ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.