ಕಡಹಿನಬೈಲು ಭಾಗದಲ್ಲಿ ಕಾಡಾನೆ ಪ್ರತ್ಯಕ್ಷ

10 nrp 3
Published on

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಮದ ಜೇನುಕಟ್ಟೆಸರ, ಭೀಮನರಿ, ಚೆನ್ನಮಣಿ ಭಾಗದಲ್ಲಿ ಐದು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಭೀತಿ ಮೂಡಿದೆ.

ಶೆಟ್ಟಿಕೊಪ್ಪದಿಂದ 2 ಕಿಮೀ ದೂರದ ಜೇನುಕಟ್ಟೆಸರ, ಭೀಮನರಿ, ಚೆನ್ನಮಣೆ, ಆರಂಬಳ್ಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿದ್ದು, ಜೇನುಕಟ್ಟೆಸರದಲ್ಲಿ 12 ಎಕರೆ ಜಾಗದಲ್ಲಿ ದೊಡ್ಡ ಕೆರೆ ಇದೆ. ಆರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿಕೊಂಡಿರುವ 4 ಕಾಡಾನೆ ಹಾಗೂ 1 ಮರಿ ಆನೆ ಸೇರಿ ಐದು ಕಾಡಾನೆಗಳು ಹಗಲು ಹೊತ್ತಿನಲ್ಲಿ ಮೀಸಲು ಅರಣ್ಯಕ್ಕೆ ಸೇರಿಕೊಳ್ಳುತ್ತಿವೆ. ಬೆಳಗ್ಗೆ ಅಥವಾ ಸಂಜೆ ಹೊತ್ತಿಗೆ ಜೇನುಕಟ್ಟೆ ಕೆರೆಗೆ ಬಂದು ನೀರು ಕುಡಿದು ಹೋಗುತ್ತಿವೆ. ಅಲ್ಲದೆ ಭದ್ರಾ ಮುಳುಗಡೆ ಪ್ರದೇಶದ ಕೆಲವು ರೈತರ ಬಾಳೆ ತೋಟಕ್ಕೆ ಲಗ್ಗೆ ಇಡುತ್ತಿವೆ. ಎರಡ್ಮೂರು ದಿನದಿಂದ ಈ ಭಾಗದಲ್ಲಿ ಕಾಡಾನೆಗಳು ಓಡಾಡುತ್ತಿದ್ದು ಮಂಗಳವಾರ ಬೆಳಗ್ಗೆ ಹಾಗೂ ಸಂಜೆಯ ಹೊತ್ತಿಗೆ ಶೆಟ್ಟಿಕೊಪ್ಪ, ಮಾಕೋಡು ರಸ್ತೆಯಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಸಬಾ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಅರಣ್ಯ ರಕ್ಷಕ ಮಂಜಯ್ಯ ಹಾಗೂ ಮೂಡಿಗೆರೆ ಎಲಿೆಂಟ್ ಟಾಸ್ಕ್‌ಪೋರ್ಸ್ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳನ್ನು ಆರಂಬಳ್ಳಿ ಮೀಸಲು ಅರಣ್ಯಕ್ಕೆ ಅಟ್ಟಿದ್ದಾರೆ. ಸಂಜೆ ನಂತರ ಗ್ರಾಮಸ್ಥರ ರಸ್ತೆಯಲ್ಲಿ ಓಡಾಡದಂತೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net