

ಶಿವಮೊಗ್ಗ: ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಇಲಾಖೆ ಜತೆಗೂಡಿ ಬೆಂಕಿಯಿಂದ ಅರಣ್ಯ ರಕ್ಷಿಸಿದರೆ ಮುಂದಿನ ಪೀಳಿಗೆಗೆ ಪರಿಶುದ್ಧ ಪರಿಸರ ಕಾಪಾಡಲು ಸಾಧ್ಯ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಮುದ್ದಿನಕೊಪ್ಪ ಟ್ರೀ ಪಾರ್ಕ್ನಲ್ಲಿ ಬೆಂಕಿಯಿಂದ ಅರಣ್ಯ ರಕ್ಷಿಸಲು ಬೀದಿ ನಾಟಕದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಅರಣ್ಯ ದೇಶದ ಸಂಪತ್ತು. ಇದರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಜಂಟಿ ಅರಣ್ಯ ಯೋಜನೆ ಮತ್ತು ಗ್ರಾಮ ಅರಣ್ಯ ಸಮಿತಿ ಮೂಲಕ ಅರಣ್ಯ ಸಂರಕ್ಷಿಸುವ ಯೋಜನೆ ಹೆಚ್ಚು ಅರ್ಥಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಟ್ರೀ ಪಾರ್ಕ್ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ತಂದು ಜಿಲ್ಲೆಯಲ್ಲಿ ಮಾದರಿ ಟ್ರೀ ಪಾರ್ಕ್ ಮಾಡಲಾಗುವುದು ಎಂದು ತಿಳಿಸಿದರು.
ಡಿಎಫ್ಒ ಜಿ.ಯು.ಶಂಕರ್ ಮಾತನಾಡಿ, ಮುದ್ದಿನಕೊಪ್ಪ ಟ್ರೀ ಪಾರ್ಕ್ನ್ನು ಸೀಮಿತ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ಬೆಂಗಳೂರು ಅರಣ್ಯ ಭವನದ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ಮಾತನಾಡಿದರು. ಕಾಪೋರೇಟರ್ ಇ.ವಿಶ್ವಾಸ್, ವಿನಯ್, ಸಂತೋಷ್, ಆಯನೂರು ಉಪವಿಭಾಗದ ಎಸಿಎಫ್ ಆರ್.ಡಿ.ಪುಟ್ನಳ್ಳಿ, ವಲಯ ಅರಣ್ಯಾಧಿಕಾರಿ ಗಿರೀಶ್ ಸಂಕರಿ, ಕಸಬಾ ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಮಜೀದ್, ಮಂಜು, ಶಿವಮೊಗ್ಗ ನಂದನ್ ಇದ್ದರು.