8.5 ಲಕ್ಷ ಸಸಿಗಳ ಮೂಲಕ ವನಮಹೋತ್ಸವ

forest
ದೇವನಹಳ್ಳಿ ತಾಲೂಕು ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಿಸಿ ಡಾ.ಎನ್.ಶಿವಶಂಕರ್, ಸಿಇಒ ಡಾ.ಕೆ.ಎನ್.ಅನುರಾಧಾ ಇದ್ದರು.
Published on

ನಾಲ್ಕೂ ತಾಲೂಕುಗಳಲ್ಲಿ ಗಿಡ ನೆಡುವ ಕಾರ್ಯಕ್ರಮ

ಪ್ರಾದೇಶಿಕ, ಸಾಮಾಜಿಕ ಅರಣ್ಯ ಜಂಟಿ ಆಂದೋಲನ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸಕ್ತ ಸಾಲಿನ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಾದೇಶಿಕ ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಜಂಟಿಯಾಗಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 8.5 ಲಕ್ಷ ಸಸಿಗಳನ್ನು ನೆಡುವ ಗುರಿಯೊಂದಿಗೆ ಮುಂದಡಿ ಇಟ್ಟಿದೆ.
ನಗರೀಕರಣ ಹಾಗೂ ಕೈಗಾರಿಕಾ ವಲಯ ವಿಸ್ತರಣೆ ಸೇರಿ ಇನ್ನಿತರ ಅನೇಕ ಕಾರಣಗಳಿಂದ ಅರಣ್ಯ ನಾಶವಾಗುತ್ತಿದ್ದು, ಭವಿಷ್ಯದಲ್ಲಿ ಪರಿಸರ ಅಸಮತೋಲನಕ್ಕೆ ಕಾರಣವಾಗುವ ಭೀತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗಳು ಸಸಿಗಳನ್ನು ನೆಡುವ ಮೂಲಕ ಅರಣ್ಯೀಕರಣಕ್ಕೆ ಒತ್ತು ನೀಡಿವೆ. ಮುಖ್ಯವಾಗಿ ಕಾಡಂಚಿನ ಗ್ರಾಮಗಳಲ್ಲಿ ಒತ್ತುವರಿ ಹಾಗೂ ಇನ್ನಿತರ ಕಾರಣಗಳಿಂದಾಗಿ ವನ ಸಂಪತ್ತು ನಾಶವಾಗುತ್ತಿದೆ. ಇಂಥ ಕಡೆಗಳಲ್ಲಿ ಜನರನ್ನು ಮನವೊಲಿಸಿ ಅವರಲ್ಲಿ ಜಾಗೃತಿ ಮೂಡಿಸಿ ವನಸಂಪತ್ತು ರಕ್ಷಿಸುವ ಜತೆಗೆ ಕಾಡಂಚಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಅರಣ್ಯ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿಯೇ ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ 3065 ಫಲಾನುಭವಿಗಳಿಗೆ ಸಸಿ ವಿತರಿಸಿ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಕಾಡಂಚಿನ ಗ್ರಾಮಗಳ ರೈತರು ಉರುವಲಿಗಾಗಿ ಕಟ್ಟಿಗೆ ಸಂಗ್ರಹಿಸಲು ಮರಗಳನ್ನು ನಾಶಪಡಿಸುತ್ತಿರುವ ಹಿನ್ನೆಲೆಯಲ್ಲಿ ಇಂಥ ಕಡೆಗಳಲ್ಲಿ ಗ್ಯಾಸ್‌ಸಿಲಿಂಡರ್, ಸೋಲಾರ್ ಮತ್ತಿತರ ಸೌಲಭ್ಯಗಳನ್ನು ನೀಡುವ ಮೂಲಕ ಕಟ್ಟಿಗೆಗಳ ಅವಲಂಬನೆ ತಗ್ಗಿಸಲು ಇಲಾಖೆಗಳು ಯೋಜನೆ ರೂಪಿಸಿವೆ.
ರಕ್ತಚಂದನ, ಗಂಧ, ಮಹಾಘನಿಗೆ ಬೇಡಿಕೆ: ಕೃಷಿ ಅರಣ್ಯ ಯೋಜನೆಯಡಿ ರೈತರು ಜಮೀನುಗಳಲ್ಲಿ ಮರಗಳನ್ನು ಬೆಳೆಸಲು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ರೈತರು ಯಾವ ಸಸಿಗಳನ್ನು ಬೆಳೆಸಲು ಆಸಕ್ತಿ ಹೊಂದಿದ್ದಾರೆ ಎಂಬುದರ ಸರ್ವೇ ಮಾಡಲಾಗಿದೆ. ಇದರ ಆಧಾರದಲ್ಲಿ ಮುಖ್ಯವಾಗಿ ಗಂಧದ ಮರ, ರಕ್ತಚಂದನ ಹಾಗೂ ಮಹಾಘನಿ ಸಸಿಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗಂಧದ ಮರ ಹಾಗೂ ರಕ್ತ ಚಂದನ ಬೆಳೆದ ರೈತರು ಕಟಾವಿನ ವೇಳೆ ಇಲಾಖೆಯಿಂದ ಅನುಮತಿ ಪಡೆಯಬೇಕು ಅದನ್ನು ಇಲಾಖೆಗೆ ಅಥವಾ ಇನ್ಯಾವುದೆ ಕಡೆಗೆ ಮಾರಾಟ ಮಾಡಲು ಸ್ವತಂತ್ರರಾಗಿರುತ್ತಾರೆ. ಆದರೆ ಅನುಮತಿ ಜತೆಗೆ ಇಲಾಖೆ ಕೊಡುವ ಪಾಸ್ ಪಡೆಯುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3 ವರ್ಷ ನಿರ್ವಹಣೆ; ವನಮಹೋತ್ಸವ ಕಾರ್ಯಕ್ರಮದಡಿ ನೆಡುತ್ತಿರುವ ಸಸಿಗಳನ್ನು 3 ವರ್ಷ ಕಾಲ ಇಲಾಖೆಯೇ ನಿರ್ವಹಣೆ ಮಾಡಲಿದೆ. ಸಸಿಗಳಿಗೆ ನೀರು, ಗೊಬ್ಬರ ಸೇರಿ ಎಲ್ಲಿಯಾದರೂ ಸಸಿಗಳು ಒಣಗಿಹೋದರೆ ಬದಲಿ ಸಸಿನೆಟ್ಟು ಪೋಷಿಸುವ ಜವಾಬ್ದಾರಿ ಇಲಾಖೆಯದ್ದಾಗಿದೆ ಇದಕ್ಕಾಗಿಯೇ ಗುತ್ತಿಗೆ ಆಧಾರದ ಮೇಲೆ ವಾಚರ್‌ಗಳನ್ನು ನೇಮಿಸಿಕೊಳ್ಳಲಾಗಿದೆ.

165 ಕಿ.ಮೀ ನೆಡುತೋಪು: ಗ್ರಾಮಾಂತರ ಜಿಲ್ಲೆಯು 2,298 ಕಿ.ಮೀ ವ್ಯಾಪ್ತಿ ಹೊಂದಿದ್ದು 22,800 ಹೆಕ್ಟೇರ್ ಭೂ ವಿಸ್ತೀರ್ಣ ಹೊಂದಿದೆ. 203.89 ಚದರ ಕಿ.ಮೀ ಅರಣ್ಯ ಪ್ರದೇಶವಿದೆ. ಒಟ್ಟು ಭೂ ಪ್ರದೇಶದಲ್ಲಿ ಶೇ.8.8 ಅರಣ್ಯ ಭೂಮಿ ಆವೃತ್ತಿಯಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕಳೆದ 5ವರ್ಷಗಳಲ್ಲಿ 2400 ಹೆಕ್ಟೇರ್ ನೆಡುತೋಪು ಮಾಡಲಾಗಿದೆ. 383 ರೈತ ಫಲಾನುಭವಿಗಳಿಗೆ 16 ಲಕ್ಷ ಸಸಿಗಳನ್ನು ವಿತರಿಸಲಾಗಿದ್ದು ಗಿಡಗಳನ್ನು ಬೆಳೆಸಿ ಪೋಷಿಸಲು 74 ಲಕ್ಷ ರೂ.ಗಳ ಹಣ ರೈತ ಫಲಾನುಭವಿಗಳಿಗೆ ನೀಡಲಾಗಿದೆ. 2024 ನೇ ಸಾಲಿನಲ್ಲಿ 251 ಲಕ್ಷ ರೂ.ಗಳ ಯೋಜನಾ ವೆಚ್ಚ ರೂಪಿಸಲಾಗಿದ್ದು 165 ಕಿ.ಮೀ ನೆಡುತೋಪು ನಿರ್ಮಿಸಲಾಗಿದೆ.

ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ಆರಂಭವಾಗಿದೆ. ಆಗಸ್ಟ್ ಅಂತ್ಯದೊಳಗೆ ನಿಗಧಿತ ಗುರಿ ತಲುಪುವ ಪ್ರಯತ್ನ ನಡೆಯುತ್ತಿದೆ. ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಕ್ರಮ ರೂಪಿಸಿದ್ದು ಪರಿಸರ ಸಮತೋಲನ ಕಾಪಾಡುವ ದೃಷ್ಟಿಯಿಂದ ಅರಣ್ಯೀಕರಣ, ವನ್ಯಜೀವಿ ಸಂರಕ್ಷಣೆ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿದೆ.

ಸರಿನಾ ಸಿಕ್ಕಲಿಗಾರ್, ಗ್ರಾಮಾಂತರ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net