ಬಿಸಿಲಿಗೆ ಬೇಯುತ್ತಿದೆ ಕಾಡು!

db pura
ಟ್ಯಾಂಕರ್ ಮೂಲಕ ವನ್ಯ ಜೀವಿಗಳಿಗೆ ನೀರುಣಿಸುವ ವ್ಯವಸ್ಥೆ
Published on

*ಬಾಯಾರಿದ ವನ್ಯಜೀವಿಗಳಿಗೆ ಸಿಬ್ಬಂದಿಯಿಂದ ಜೀವಜಲ
*ಕಾಡ್ಗಿಚ್ಚು ತಡೆಯಲು ಕಾಡಂಚಿನ ಜನತೆಗೆ ಅರಿವು ಕಾರ್ಯ

ವೆಂಕಟರಾಜು.ಎಸ್ ದೊಡ್ಡಬಳ್ಳಾಪುರ
ಬಿಸಿಲ ಬೇಗೆ ತಾಲೂಕಿನಾದ್ಯಂತ ಅರಣ್ಯವನ್ನು ಸುಡಲಾರಂಭಿಸಿದೆ. ಅರಣ್ಯ ಪ್ರದೇಶದಲ್ಲಿ ಉಂಟಾಗಿರುವ ನೀರಿನ ಕೊರತೆಯಿಂದ ವನ್ಯ ಜೀವಿಗಳಿಗೆ ಸಮಸ್ಯೆ ಕಾಡುತ್ತಿದೆ, ಅರಣ್ಯ ಇಲಾಖೆ ಟ್ಯಾಂಕರ್ ಮೂಲಕ ವನ್ಯ ಜೀವಿಗಳಿಗೆ ನೀರುಣಿಸುವ ವ್ಯವಸ್ಥೆ ಮಾಡುತ್ತಿದ್ದು, ಈ ನಡುವೆ ಶಾಶ್ವತವಾಗಿ ಅರಣ್ಯದಲ್ಲಿ ನೀರಿನ ಕೊರತೆ ನೀಗಿಸುವ ಕ್ರಮಕ್ಕೆ ಪರಿಸರ ಆಸಕ್ತರು ಆಗ್ರಹಿಸಿದ್ದಾರೆ.
ತಾಲೂಕಿನಾದ್ಯಂತ 17331.24 ಎಕರೆ ಪ್ರದೇಶ ಅರಣ್ಯ ವ್ಯಾಪ್ತಿಯಲ್ಲಿದೆ. ಬಹುತೇಕ ಮಳೆಯಾಶ್ರಿತವಾಗಿದ್ದು, ಅರಣ್ಯ, ವನ್ಯ ಜೀವಿಗಳಿಗೂ ಮಳೆಯ ನೀರೇ ಜಲಮೂಲವಾಗಿದೆ. ಮಾನ್ಸುನ್ ಮಳೆ ಕೈಕೊಟ್ಟ ಹಿನ್ನೆಲೆ ನೀರಿನ ಕೊರತೆಯಾಗಿ, ಬರ ಇನ್ನಿಲ್ಲದಂತೆ ಕಾಡುತ್ತಿದ್ದು,
ಬರ ಹಾಗೂ ಬಿಸಿಲ ತೀವ್ರತೆಗೆ ಬಹುತೇಕ ಕೆರೆಗಳು ಬರಿದಾಗಿವೆ.
ಅರಣ್ಯದೊಳಗಿನ ಸಣ್ಣಪುಟ್ಟ ಕುಂಟೆಗಳು, ನೀರಿನ ಕಾಲುವೆಗಳು ಸಂಪೂರ್ಣ ಖಾಲಿಯಾಗಿದೆ. ಇದರಿಂದ ವನ್ಯ ಜೀವಿಗಳಿಗೆ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಇವುಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ಸಲುವಾಗಿ ಅರಣ್ಯ ಇಲಾಖೆ ವತಿಯಿಂದ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ಹಿಂದುಳಿದಿದ್ದು, ಅರಣ್ಯಗಳಲ್ಲಿ ಜಲಮೂಲಗಳ ರಕ್ಷಣೆಗೂ ಒತ್ತು ನೀಡುವುದು ಅಗತ್ಯವಾಗಿದೆ.

ಬಾಯಾರಿದೆ ಅರಣ್ಯ ತಾಲೂಕಿನಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗವಿದ್ದು, ಈ ಭಾಗದ ಅರಣ್ಯದಲ್ಲಿ ಬಹುತೇಕ ಒಣಎಲೆ ಉದುರುವ ಹಾಗೂ ಕುರುಚಲು ಕಾಡುಗಳನ್ನು ಒಳಗೊಂಡಿದೆ. ಬಹುತೇಕ ಮಳೆಯಾಶ್ರಿತ ಪ್ರದೇಶವನ್ನು ಒಳಗೊಂಡಿದೆ. ಆದರೆ ಮಳೆಯ ಪ್ರಮಾಣ ಕಡಿಮೆಯಿದ್ದ ಕಾರಣ ಬಿಸಿಲ ತಾಪ ಹೆಚ್ಚಳವಾಗಿದೆ. ಜತೆಗೆ ಬೇಸಿಗೆ ಮಳೆಯಲ್ಲೂ ಕಳೆದ ತಿಂಗಳ ವೇಳೆಗೆ ಶೇ.68 ಮಳೆಕೊರತೆ ಕಾಡಿದೆ. ಇದರಿಂದ ಜನವಸತಿ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿರುವುದಲ್ಲದೆ ವನ್ಯ ಜೀವಿಗಳ ವಾಸಸ್ಥಳವಾದ ಅರಣ್ಯದಲ್ಲೂ ಸಮಸ್ಯೆ ಎದುರಾಗಿದೆ. ಮಳೆ ಮತ್ತಷ್ಟು ತಡವಾದರೆ ಈ ಪರಿಸ್ಥಿತಿ ಬಿಗಡಾಯಿಸುವ ಆತಂಕವಿದೆ.

ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಸಾಮಾನ್ಯವಾಗಿ ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಉಂಟಾಗಿ ಟ್ಯಾಂಕರ್ ನೀರಿನ ಮೊರೆ ಹೋಗುವುದು ಸಾಮಾನ್ಯ. ಈ ಬಾರಿ ಕೂಡ 68 ಹಳ್ಳಿಗಳಲ್ಲಿ ನೀರಿನ ಕೊರತೆ ಕಾಡುವ ಸಾಧ್ಯತೆಯನ್ನು ಜಿಲ್ಲಾಡಳಿತ ಗುರುತಿಸಿದೆ. ಇದಲ್ಲದೆ ನಗರ ವ್ಯಾಪ್ತಿಯಲ್ಲೂ ಕೂಡ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದೀಗ ಕಾಡಿನ ಸರದಿ. ಬಹುತೇಕ ಅರಣ್ಯ ಪ್ರದೇಶದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಪ್ರಾಣಿಗಳಿಗೆ ಕುಡಿಯಲು ಕೂಡ ನೀರಿನ ಲಭ್ಯತೆ ಇಲ್ಲ. ಇದರಿಂದ ಅರಣ್ಯ ಇಲಾಖೆಯು ಅರಣ್ಯ ಪ್ರದೇಶದಲ್ಲಿ ಕೃತಕ ತೊಟ್ಟಿಗಳನ್ನು ಇಟ್ಟು, ಅಲ್ಲಿಗೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡುತ್ತಿದೆ.

ಕಾಡ್ಗಿಚ್ಚಿನ ಆತಂಕ ಬೇಸಿಗೆಯಲ್ಲಿ ಅರಣ್ಯಕ್ಕೆ ಕಾಡ್ಗಿಚ್ಚಿನ ಆತಂಕ ಸಾಮಾನ್ಯವಾಗಿದೆ. ತಾಲೂಕಿನಾದ್ಯಂತ ಹೆಚ್ಚಾಗಿ ಕುರುಚಲು ಕಾಡು ಇರುವುದರಿಂದ ಆ ಸಮಸ್ಯೆ ಹೆಚ್ಚು. ಇನ್ನೊಂದೆಡೆ ಈ ಭಾಗದಲ್ಲಿ ರೈತರು ಅರಣ್ಯಗಳಿಗೆ ಜಾನುವಾರಗಳನ್ನು ಮೇಯಿಸಲು ಹೋಗುದಲ್ಲದೆ, ಅಲ್ಲಿ ಹಸಿಹುಲ್ಲು ಉತ್ತಮವಾಗಿ ಬರಲಿ ಎಂಬ ಉದ್ದೇಶದಿಂದ ಒಣಹುಲ್ಲುಗಳಿಗೆ ಬೆಂಕಿ ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ ಕಾಡ್ಗಿಚ್ಚು ಕಾಣಿಸುವ ಸಾಧ್ಯತೆ ಹೆಚ್ಚಾಗಿದೆ. ಅರಣ್ಯ ವಲಯದಲ್ಲಿ ಬಹುತೇಕ ಗಿಡ,ಮರಗಳು ಮಳೆ ಕೊರತೆಯಿಂದ ಒಣಗಿದ್ದು, ಕಾಡ್ಗಿಚ್ಚಿನ ಆತಂಕ ಹೆಚ್ಚಾಗಿದೆ. ಇದರಿಂದ ಎಚ್ಚರವಹಿಸಿರುವ ತಾಲ್ಲೂಕು ಅರಣ್ಯ ಇಲಾಖೆ ಸಿಬ್ಬಂದಿ ಕಾಡಂಚಿನ ಪ್ರದೇಶದ ಜನತೆಯೊಂದಿಗೆ ಸಭೆಗಳನ್ನ ಮಾಡಿ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.

ಶಾಶ್ವತ ಪರಿಹಾರವಿಲ್ಲ ಬೇಸಿಗೆಯಲ್ಲಿ ಅರಣ್ಯ ಪ್ರದೇಶದಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ಇದರಿಂದ ರಾಜ್ಯದ ಕೆಲ ಅರಣ್ಯ ಪ್ರದೇಶದಲ್ಲಿ ಸೋಲಾರ್ ಅಳವಡಿಸಿರುವ ಬೋರ್‌ವೆಲ್‌ಗಳ ಮೂಲಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ತಾಲೂಕಿನಲ್ಲಿ ಈ ರೀತಿ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿಲ್ಲ. ಇದಲ್ಲದೆ, ಅರಣ್ಯದೊಳಗಿರುವ ಕುಂಟೆಗಳು, ಸಣ್ಣ ಕೆರೆಗಳ ಸಂರಕ್ಷಣೆ ಹಾಗೂ ಅವುಗಳ ಹೂಳೆತ್ತು ಕಾರ್ಯ ಕೂಡ ಆಗಿಲ್ಲ. ಅವುಗಳ ಸಂರಕ್ಷಣೆಯಾದರೆ ಸ್ವಲ್ಪ ಮಟ್ಟಿಗೆ ಅರಣ್ಯದಲ್ಲಿ ನೀರಿನ ಲಭ್ಯತೆಗೆ ನೆರವಾಗಲಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕಾಗಿದೆ.

ಅರಣ್ಯ ಪ್ರದೇಶದಲ್ಲಿ ನೀರಿನ ಸಮಸ್ಯೆ ದೂರಮಾಡಲು ಅರಣ್ಯದಲ್ಲಿನ ಜಲಮೂಲಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಒತ್ತು ನೀಡಬೇಕು. ಅದರ ಜತಗೆ ಕಾಡ್ಗಿಚ್ಚು ಅಪಾಯದ ಬಗ್ಗೆ ಕೂಡ ಎಚ್ಚರವಹಿಸಬೇಕಿದೆ.
ಲೋಹಿತ್ ವೈ.ಟಿ, ಹಿರಿಯ ಯೋಜನಾಧಿಕಾರಿ, ಡಬ್ಲ್ಯೂಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net