ಅರಣ್ಯ ಸೇವೆ ಪರೀಕ್ಷೆ; 90ನೇ ರ‌್ಯಾಂಕ್ ಪಡೆದ ನಿಶಾ

Kudlgi Nisha
ಕೂಡ್ಲಿಗಿಯ ಎಸ್.ಎನ್.ನಿಶಾಗೆ ಸಿಹಿ ತಿನಿಸುತ್ತಿರುವ ತಾಯಿ ಜಯಮ್ಮ, ದೊಡ್ಡಮ್ಮ ನಾಗಮಣಿ ಜಿಂಕಾಲ್ ಹಾಗೂ ಅಜ್ಜಿ ಸರೋಜಮ್ಮ.
Published on

ಕೂಡ್ಲಿಗಿ: ಯುಪಿಎಸ್‌ಸಿ ನಡೆಸಿದ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ಪಟ್ಟಣದ ಎಸ್.ಎನ್.ನಿಶಾ 90ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ರಾಜ್ಯದಿಂದ 11 ಜನ ಐಎಫ್‌ಎಸ್‌ಗೆ ಆಯ್ಕೆಯಾಗಿದ್ದು, ಇದರಲ್ಲಿ ಇವರೂ ಒಬ್ಬರು.

ಪಿಯುವರೆಗೂ ಪಟ್ಟಣದಲ್ಲಿ ಅಭ್ಯಾಸ ಮಾಡಿರುವ ನಿಶಾ ಅವರು ಎಂಬಿಬಿಎಸ್ ಕನಸು ಹೊಂದಿದ್ದರು. ನಿರೀಕ್ಷಿತ ಅಂಕ ಸಾಧ್ಯವಾಗದ ಕಾರಣ ಒಲ್ಲದ ಮನಸ್ಸಿನಿಂದ ಬಿಎಸ್ಸಿ ಫಾರೆಸ್ಟರಿ ಆಯ್ಕೆ ಮಾಡಿ, ಕೊಡಗು ಜಿಲ್ಲೆ ಪೊನ್ನಂಪೇಟೆಯಲ್ಲಿ ಅಭ್ಯಾಸ ಶುರುಮಾಡಿದರು. ಏನಾದರೂ ಸಾಧಿಸಬೇಕೆಂಬ ಸದಾ ತುಡಿತ ಹೊಂದಿದ್ದ ನಿಶಾಗೆ ಬಿಎಸ್ಸಿಯಲ್ಲೇ ಐಎಫ್‌ಎಸ್ ಮಾಡಬಹುದು ಎಂಬುದನ್ನು ಉಪನ್ಯಾಸಕರು ತಿಳಿಸಿದ್ದರು.

ಅಲ್ಲಿಂದ ಸಾಮಾನ್ಯ ಜ್ಞಾನದತ್ತ ಹೆಚ್ಚಿನ ಅಭ್ಯಾಸ ಮಾಡಿ, ಬಿಎಸ್ಸಿ ಕೊನೇ ವರ್ಷದಲ್ಲಿ ಯುಪಿಎಸ್‌ಸಿಗೆ ತಯಾರಿ ನಡೆಸಿದರು. ನಂತರ ಎರಡು ಕಡೆ ಕೋಚಿಂಗ್ ಪಡೆದರು. ಮೊದಲ ಪ್ರಯತ್ನದಲ್ಲಿ ಅಷ್ಟಾಗಿ ತಯಾರಿ ಇರಲಿಲ್ಲ. ಎರಡನೇ ಪ್ರಯತ್ನದಲ್ಲಿ ಜಿಕೆ-ಸಿಸ್ಯಾಟ್ ಪರೀಕ್ಷೆಗಳಲ್ಲಿ ಹಿನ್ನಡೆಯಾಗಿದೆ. ಛಲ ಬಿಡದೆ ಮೂರನೇ ಪ್ರಯತ್ನ ನಡೆಸಿದಾಗ ಸಂದರ್ಶನದವರೆಗಷ್ಟೇ ಹೋಗಲು ಸಾಧ್ಯವಾಗಿದೆ. ಮನೆಯವರ ನಿರಂತರ ಪ್ರೋತ್ಸಾಹ ಹಾಗೂ ಅಚಲ ಗುರಿಯೊಂದಿಗೆ ನಾಲ್ಕನೇ ಬಾರಿ ಕಠಿಣಾಭ್ಯಾಸ ಮಾಡಿದ ಪರಿಣಾಮ ಈ ಯಶಸ್ಸು ಮುಡಿಗೇರಿದೆ.

ಸಾಧನೆಗೆ ನನ್ನ ತಂದೆ ದಿ.ಡಾ.ಶ್ರೀನಿವಾಸ್, ತಾಯಿ ಜಯಮ್ಮ ಹಾಗೂ ದೊಡ್ಡಮ್ಮ ನಾಗಮಣಿ ಜಿಂಕಾಲ್ ಕಾರಣ. ಆರಂಭದಲ್ಲಿ ಸೋಲುಂಡರೂ ಎದೆಗುಂದದೆ ಪರೀಕ್ಷೆ ಎದುರಿಸಲು ಪ್ರೋತ್ಸಾಹಿಸಿದರು. ಗ್ರಾಮೀಣ ವಿದ್ಯಾರ್ಥಿಗಳೆಂಬ ಕೀಳರಿಮೆ ಸರಿಯಲ್ಲ. ಉನ್ನತ ಗುರಿಗೆ ಗುರುವಿನ ಮಾರ್ಗದರ್ಶನ ಅಗತ್ಯ. ಇದರೊಂದಿಗೆ ಸತತ ಪ್ರಯತ್ನ-ಅಭ್ಯಾಸವಿದ್ದರೆ ಖಂಡಿತ ಯಶಸ್ಸು ಸಾಧ್ಯ. ಆನ್‌ಲೈನ್ ತರಬೇತಿ ಅವಕಾಶಗಳು ಸಾಕಷ್ಟಿವೆ. ಇವುಗಳ ಸಹಾಯ ಪಡೆದು ಗ್ರಾಮೀಣ ಪ್ರದೇಶದಲ್ಲೇ ಓದಬಹುದು. ಸತತ ಓದು ಹಾಗೂ ಪತ್ರಿಕೆಗಳನ್ನು ಹೆಚ್ಚಾಗಿ ಓದಿದರೆ ಉನ್ನತ ಗುರಿ ಮುಟ್ಟಲು ಸಹಾಯವಾಗುತ್ತದೆ.ಎಸ್.ಎನ್.ನಿಶಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net