

ಮಡಿಕೇರಿ:
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ತಲೆ ತಲಾಂತರದಿಂದ ವಾಸ ಮಾಡುತ್ತಿರುವ ಆದಿವಾಸಿಗಳಿಗೆ ಇನ್ನು ಕೂಡ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿನ ಅನುಕೂಲಗಳು ಸಮರ್ಪಕವಾಗಿ ತಲುಪಿಲ್ಲ. ತಮ್ಮನ್ನು ಬಲವಂತವಾಗಿ ಹೊರದಬ್ಬುವ ಹುನ್ನಾರವೇ ಇದಕ್ಕೆಲ್ಲಾ ಕಾರಣ ಎನ್ನುವುದು ಕಾಡಿನ ಜನರ ಆರೋಪ. ಈ ಹಿನ್ನೆಲೆಯಲ್ಲಿ ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ವತಿಯಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿದ್ದರೂ ಆಡಳಿತ ವರ್ಗದಿಂದ ನಿರೀಕ್ಷಿತ ಸ್ಪಂದನೆ ಸಿಗದ ನೋವು ಇವರನ್ನು ಕಾಡುತ್ತಿದೆ.
ಅರಣ್ಯ ಹಕ್ಕುಗಳ ಕಾಯಿದೆ ೨೦೦೬, ಡಿಸೆಂಬರ್ ೨೦೦೬ ರಲ್ಲಿ ಅಂಗೀಕರಿಸಲಾಯಿತು. ವಸಾಹತುಶಾಹಿ ಯುಗದ ಅರಣ್ಯ ಕಾನೂನುಗಳಿಂದ ಅರಣ್ಯವಾಸಿ ಆದಿವಾಸಿಗಳಿಗೆ ಆದ ಅನ್ಯಾಯಕ್ಕೆ ಪರಿಹಾರ ಹುಡುಕುವ ಸಲುವಾಗಿ ಈ ಕಾಯಿದೆ ಜಾರಿಗೆ ತರಲಾಯಿತು. ಅರಣ್ಯದಲ್ಲಿ ವಾಸ ಮಾಡುವ ಸಾಂಪ್ರದಾಯಿಕ ಬುಡಕಟ್ಟು ಜನರಿಗೆ ಅವರ ಹಕ್ಕುಗಳ ಕಾನೂನು ಮಾನ್ಯತೆಯನ್ನು ಈ ಕಾಯಿದೆ ಕೊಡುತ್ತದೆ.
ಅರಣ್ಯ ಹಕ್ಕುಗಳ ಕಾಯಿದೆ ೨೦೦೬ ದೇಶದ ಒಂದು ಶಾಸನವಾಗಿದೆ. ಅರಣ್ಯದಲ್ಲಿ ವಾಸಿಸುವ ಸಮುದಾಯಗಳು ಮತ್ತು ಬುಡಕಟ್ಟು ಜನಾಂಗಗಳ ಹಕ್ಕುಗಳನ್ನು ಗುರುತಿಸುವ ಮತ್ತು ಭದ್ರಪಡಿಸುವ ಗುರಿ ಈ ಕಾಯಿದೆಯ ಹಿಂದಿದೆ. ಇದು ಅರಣ್ಯ ಭೂಮಿ, ಅಲ್ಲಿಯ ಸಂಪನ್ಮೂಲಗಳನ್ನು ಹೊಂದುವ, ಬಳಸುವ ಹಾಗೂ ನಿರ್ವಹಿಸುವ ಹಕ್ಕು ಸೇರಿದಂತೆ ವೈಯಕ್ತಿಕ ಮತ್ತು ಸಮುದಾಯ ಅರಣ್ಯ ಹಕ್ಕುಗಳನ್ನು ನಿಬಂಧನೆಗಳನ್ನು ಒಳಪಟ್ಟು ನೀಡಲಾಗಿದೆ.
ಅರಣ್ಯವಾಸಿ ಬುಡಕಟ್ಟು ಸಮುದಾಯದ ಸದಸ್ಯರಿಗೆ ಮಾಡಿದ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು,
ಇತರ ಸಾಂಪ್ರದಾಯಿಕ ಬುಡಕಟ್ಟು ಸಮುದಾಯಗಳನ್ನು ಒಳಗೊಂಡಂತೆ ಅರಣ್ಯದಲ್ಲಿ ವಾಸಿಸುವ ಪರಿಶಿ?್ಟ ಬುಡಕಟ್ಟು ಸಮುದಾಯಗಳಿಗೆ ಭೂ ಹಿಡುವಳಿ, ಜೀವನೋಪಾಯ ಮತ್ತು ಆಹಾರ ಭದ್ರತೆಯನ್ನು ಖಾತರಿಪಡಿಸಲು, ಸುಸ್ಥಿರ ಬಳಕೆ, ಪ್ರಕೃತಿ ಸಂರಕ್ಷಣೆ ಹಾಗೂ ಪರಿಸರ ಸಮತೋಲನದ ಸಂರಕ್ಷಣೆಗಾಗಿ ಅರಣ್ಯ ಹಕ್ಕುದಾರರ ಮೇಲೆ ಅಧಿಕಾರ ಮತ್ತು ಕಟ್ಟುಪಾಡುಗಳನ್ನು ಸೇರಿಸುವ ಮೂಲಕ ಅರಣ್ಯ ಸಂರಕ್ಷಣಾ ಚೌಕಟ್ಟು ಹೆಚ್ಚಿಸುವ ಗುರಿ ಇಟ್ಟುಕೊಂಡು ಅರಣ್ಯ ಹಕ್ಕುಗಳ ಕಾಯಿದೆ ೨೦೦೬ ಜಾರಿಯಾಗಿದೆ.
ಅರಣ್ಯ ಹಕ್ಕುಗಳ ಕಾಯಿದೆ ೨೦೦೬ ಅರಣ್ಯದಲ್ಲಿ ವಾಸಿಸುವ ಸಮುದಾಯಗಳಿಗೆ ಅರಣ್ಯ ಭೂಮಿಯ ವೈಯಕ್ತಿಕ ಮತ್ತು ಸಮುದಾಯದ ಮಾಲೀಕತ್ವವನ್ನು ಗುರುತಿಸುವುದು, ಜೀವನೋಪಾಯದ ಉದ್ದೇಶಗಳಿಗಾಗಿ ಅರಣ್ಯ ಸಂಪನ್ಮೂಲಗಳನ್ನು ಬಳಸುವ ಮತ್ತು ಸಂಗ್ರಹಿಸುವುದು, ಅರಣ್ಯಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವುದು ಸೇರಿದಂತೆ ಹಲವು ಪ್ರಮುಖ ಹಕ್ಕುಗಳನ್ನು ಒಳಗೊಂಡಿದೆ.
೪ ಹೆಕ್ಟೇರ್‌ಗಳವರೆಗೆ ಬುಡಕಟ್ಟು ಅಥವಾ ಅರಣ್ಯ ಸಮುದಾಯಗಳು ಕೃಷಿ ಮಾಡುವ ಭೂಮಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡುತ್ತದೆ. ಸಂಬಂಧಿತ ಕುಟುಂಬ ಪ್ರಸ್ತುತ ವ್ಯವಸಾಯ ಮಾಡುತ್ತಿರುವ ಭೂಮಿಗೆ ಮಾತ್ರ ಸ್ವಾಮ್ಯವನ್ನು ನೀಡಲಾಗುತ್ತದೆ. ಯಾವುದೇ ಹೊಸ ಜಮೀನು ಕೊಡುವುದಿಲ್ಲ. ಅಕ್ರಮ ಹೊರಹಾಕುವಿಕೆ ಅಥವಾ ಬಲವಂತದ ವಲಸೆಗಾಗಿ ಪುನರ್ವಸತಿ ಪ್ರಕ್ರಿಯೆ ಮತ್ತು ಅರಣ್ಯ ರಕ್ಷಣೆ ನಿಬರ್ಂಧಗಳ ಆಧಾರದ ಮೇಲೆ ಮೂಲಭೂತ ಸೌಕರ್ಯಗಳನ್ನು ಕೊಡಬೇಕಾಗುತ್ತದೆ.
ಸಾಂಪ್ರದಾಯಿಕವಾಗಿ ಸಂರಕ್ಷಿಸಲ್ಪಟ್ಟ ಮತ್ತು ದೀರ್ಘಕಾಲೀನ ಬಳಕೆಗಾಗಿ ಸಂರಕ್ಷಿಸಲ್ಪಟ್ಟಿರುವ ಯಾವುದೇ ಸಮುದಾಯ ಅರಣ್ಯ ಸಂಪನ್ಮೂಲಗಳನ್ನು ರಕ್ಷಿಸುವ, ಪುನರುತ್ಪಾದಿಸುವ, ಸಂರಕ್ಷಿಸುವ ಅಥವಾ ನಿರ್ವಹಿಸುವ ಅಧಿಕಾರವನ್ನು ಕೂಡ ಈ ಕಾಯಿದೆ ಒಳಗೊಂಡಿದೆ.
ಅರಣ್ಯ ಹಕ್ಕುಗಳ ಕಾಯಿದೆ ೨೦೦೬ಕ್ಕೆ ಸಂಬಂಧಿಸಿದಂತೆ ತಮ್ಮ ಹಕ್ಕುಗಳಿಗಾಗಿ ಜಿಲ್ಲೆಯ ಆದಿವಾಸಿಗಳು ೨೦೦೯-೧೦ರಿಂದ ಪ್ರಯತ್ನ ನಡೆಸುತ್ತಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ವ್ಯಯಕ್ತಿಕ ಹಕ್ಕಿನ ಅಡಿಯಲ್ಲಿ ಕೆಲವರಿಗೆ ೫, ೧೦ ಸೆಂಟ್ ಜಾಗಗಳನ್ನು ನೀಡಿರುವುದು ಹೊರತುಪಡಿಸಿದರೆ ಉಳಿದ ಯಾವುದೇ ಹಕ್ಕಿನ ಅನುಕೂಲ ಆದಿವಾಸಿಗಳಿಗೆ ಸಿಕ್ಕಿಲ್ಲ ಎನ್ನುತ್ತಾರೆ ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿಯ ಪದಾಧಿಕಾರಿಗಳು.
ಜಿಲ್ಲೆಯಲ್ಲಿ ಪೊನ್ನಂಪೇಟೆ, ವಿರಾಜಪೇಟೆ, ಹಾಗೂ ಸೋಮವಾರಪೇಟೆ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳು ವಾಸವಾಗಿದ್ದಾರೆ. ಜೇನುಕುರುಬ, ಬೆಟ್ಟಕುರುಬ, ಪಂಜರಿ ಎರವ, ಪಣಿ ಎರವ, ಕುಡಿಯ, ಸೋಲಿಗ ಮತ್ತಿತರ ಆದಿವಾಸಿಗಳು ಈ ವ್ಯಾಪ್ತಿಯ ಅರಣ್ಯಗಳಲ್ಲಿದೊಡ್ಡ ಪ್ರಮಾಣದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಪೈಕಿ ಬಹುತೇಕರಿಗೆ ವ್ಯಯಕ್ತಿಕ ಹಕ್ಕಿನ ಅಡಿಯಲ್ಲಿ ನಿವೇಶನಗಳನ್ನು ಕೊಡಲಾಗಿದೆ. ಇನ್ನು ಕೆಲವರು ಇದರಿಂದಲೂ ವಂಚಿತರಾಗಿದ್ದಾರೆ.
ಅರಣ್ಯಗಳಲ್ಲಿ ನೆಲೆಕಂಡುಕೊಂಡಿರುವ ಆದಿವಾಸಿಗಳಿಗೆ ಬೇಸಾಯದ ಭೂಮಿಯನ್ನು ಗುರುತಿಸದೆ ಅನ್ಯಾಯ ಮಾಡಿರುವ ಆರೋಪ ಕೇಳಿಬರುತ್ತಿದೆ. ಸಮುದಾಯದ ಹಕ್ಕು, ಸಮುದಾಯದ ಸಂಪನ್ಮೂಲ ಹಕ್ಕು, ಆವಾಸ ಸ್ಥಾನದ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಿ ಸುಮಾರು ೧೪ ವರ್ಷ ಕಳೆದಿದ್ದರೂ ಜನಪ್ರತಿನಿಧಿಗಳು ಮತ್ತು ಆಡಳಿತ ವರ್ಗ ಆದಿವಾಸಿಗಳಿಗೆ ಪೂರಕವಾಗಿ ಸ್ಪಂದಿಸಿಲ್ಲ ಎನ್ನುತ್ತಾರೆ ಆದಿವಾಸಿ ಸಮುದಾಯದ ಮುಖಂಡರು.
ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಮತ್ತು ಇತರೆ ಪಾರಂಪರಿಕ ಸಮುದಾಯದವರು ಸೇರಿದಂತೆ ಅರಣ್ಯ ಹಕ್ಕುಗಳ ಕಾಯಿದೆ ೨೦೦೬ರ ಹಕ್ಕುಗಳಿಗಾಗಿ ಒಟ್ಟು ೨,೯೪,೩೬೩ ಅರ್ಜಿಗಳು ಸಲ್ಲಿಕೆಯಾಗಿದೆ. ೧೬,೨೦೦ ಹಕ್ಕುಪತ್ರಗಳನ್ನಷ್ಟೇ ವಿತರಿಸಲಾಗಿದೆ. ೨೭,೬೬೦ ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ. ಅರ್ಜಿಗಳನ್ನು ಸ್ವೀಕರಿಸಲು ಯಾವುದೇ ಸಮಯದ ಮಿತಿಯಿಲ್ಲ. ಅರಣ್ಯ ಹಕ್ಕುಗಳ ನಿಯಮಗಳ ಪ್ರಕಾರ ಗ್ರಾಮ ಸಭೆಗಳು ಅರ್ಜಿಗಳನ್ನು ಕುರಿತು ಪ್ರಕ್ರಿಯೆ ನಡೆಸಬೇಕು. ಹಕ್ಕು ಕೋರಿಕೆಗಾಗಿ ಗ್ರಾಮ ಸಭೆ ಅರ್ಜಿಗಳಿಗಾಗಿ ಕರೆ ನೀಡುತ್ತದೆ ಮತ್ತು ಹಕ್ಕು ಕೋರಿಕೆಗಳನ್ನು ಸ್ವೀಕರಿಸಲು ಅರಣ್ಯ ಹಕ್ಕುಗಳ ಸಮಿತಿಗೆ ಅಧಿಕಾರಿ ನೀಡುತ್ತದೆ. ವೈಯಕ್ತಿಕ ಅಥವಾ ಸಮುದಾಯ ಅರಣ್ಯ ಹಕ್ಕುಗಳ ಅಥವಾ ಅವೆರೆಡರ ಸ್ವರೂಪ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಪ್ರಾಧಿಕಾರ ಗ್ರಾಮ ಸಭೆಗೆ ಇರುವುದರಿಂದ, ಪ್ರಕ್ರಿಯೆಯನ್ನು ಪ್ರಾರಂಭಿಸುವ ಕಾರ್ಯವನ್ನು ಗ್ರಾಮಸಭೆ ಮಾಡಬೇಕಾಗುತ್ತದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ, ವಿರಾಜಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿ ವಾಸ ಮಾಡುತ್ತಿರುವ ಮೂಲನಿವಾಸಿ ಆದಿವಾಸಿ ಸಮುದಾಯದವರಿಗೆ ತಮ್ಮ ಸಂವಿಧಾನ ಬದ್ಧ ಹಕ್ಕಾಗಿರುವ ೨೦೦೬ರ ಅರಣ್ಯ ಹಕ್ಕು ಕಾಯಿದೆಯ ವೈಯಕ್ತಿಕ ಹಕ್ಕು, ಸಮುದಾಯದ ಹಕ್ಕು, ಸಮುದಾಯದ ಸಂಪನ್ಮೂಲ ಹಕ್ಕು ಹಾಗೂ ಆವಾಸ ಸ್ಥಾನದ ಹಕ್ಕನ್ನು ಸಮರ್ಪಕವಾಗಿ ಮನ್ನಣೆ ಮಾಡುವಲ್ಲಿ ೧೪ ವರ್ಷಗಳ ವಿಳಂಬ ಮಾಡಿ ಅನ್ಯಾಯ ಮಾಡಲಾಗಿದೆ. ಹಾಗಾಗಿ ಈ ಹಕ್ಕುಗಳನ್ನು ತ್ವರಿತವಾಗಿ ಮನ್ನಣೆ ಮಾಡುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಆಸಕ್ತಿ ತೋರಿಸಬೇಕು.
ಶಿವು, ಕಾರ್ಯದರ್ಶಿ, ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ, ನಾಗರಹೊಳೆ
ಶಿವಮೊಗ್ಗ, ಮೈಸೂರು, ರಾಮನಗರ, ಧಾರವಾಡ, ಕೊಡಗು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಮುದಾಯದ ಹಕ್ಕು ಕೋರಿ ಬಂದಿರುವ ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದಿದೆ. ೨೦೨೦ ಮೇ ತಿಂಗಳಿನಿಂದ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಆಯ್ಕೆಯಾಗದ ಹಿನ್ನೆಲೆಯಲ್ಲಿ ಉಪವಿಭಾಗ ಮಟ್ಟದ ಸಮಿತಿ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳು ಕಾರ್ಯನಿರ್ವಹಿಸದ ಕಾರಣ ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಇರುತ್ತವೆ.
ಬಿ. ನಾಗೇಂದ್ರ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ