ಸಾಗುವಳಿದಾರರಿಗೆ ಖಾತೆ ಪಹಣಿ ನೀಡಲು ಶಿಫಾರಸು

mkg
Published on

ಹೊನ್ನಾಳಿ: ಅರಣ್ಯ ಭೂಮಿಯಲ್ಲಿ 60-70 ವರ್ಷಗಳಿಂದ ಉಳುಮೆ ಮಾಡುತ್ತಿರುವ 30 ಅನುಸೂಚಿತ ಬುಡಕಟ್ಟು ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮತ್ತು ಖಾತೆ ಪಹಣಿ ಮಾಡಿಕೊಡಲು ಅ. 11ರಂದು ತೀರ್ಮಾನಿಸಿ, ಡಿಸಿಗೆ ಶಿಫಾರಸು ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ಹಕ್ಕುಗಳ ಅಧಿನಿಯಮ 2008 ನಿಯಮ ಪ್ರಕಾರ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅರಣ್ಯ ಭೂಮಿಯಲ್ಲಿ ತಲಾತಲಾಂತರದಿಂದ ವಾಸವಿದ್ದು, ಉಳುಮೆ ಮಾಡಿಕೊಂಡು ಬಂದ ಸಾಗುವಳಿದಾರರಿಗೆ ಭೂಮಿಯ ಮೇಲಿನ ಹಕ್ಕನ್ನು ಸ್ಥಿರೀಕರಿಸುವ ಸಾಗುವಳಿ ಹಕ್ಕನ್ನು ಪರಿಶೀಲಿಸಿ, ನಂತರ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದರು.

ತಾಲೂಕಿನ 16 ಹಾಗೂ ಚನ್ನಗಿರಿ ತಾಲೂಕಿನ 14 ಸೇರಿದಂತೆ ಒಟ್ಟು 30 ಅರ್ಜಿಗಳ ಪರಿಶೀಲನೆ ಅಂತಿಮವಾಗಿ ಅ. 11ರಂದು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜೇಗೌಡ, ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಚನ್ನಗಿರಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭಾ, ಚನ್ನಗಿರಿ ವಲಯ ಅರಣ್ಯಧಿಕಾರಿ ಮಧುಸೂಧನ್, ಶಾಂತಿಸಾಗರ ವಲಯದ ಜಗದೀಶ್, ಹೊನ್ನಾಳಿ ಸಮಾಜ ಕಲ್ಯಾಣಾಧಿಕಾರಿ ಉಮಾ, ತಾಪಂ ಯೋಜನಾಧಿಕಾರಿ ಭೀಮಾನಾಯ್ಕ, ಪಿಡಿಒ ರಾಘವೇಂದ್ರಪ್ಪ, ಸ್ಫೂರ್ತಿ ಸಂಸ್ಥೆಯ ರೂಪ್ಲಾನಾಯ್ಕಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net