

ಶಿವಮೊಗ್ಗ: ಅರಣ್ಯ ಪಾರಂಪರಿಕ ಹಕ್ಕು ಕಾಯ್ದೆಯಡಿ ಬುಡಕಟ್ಟು ಜನರಿಗೆ ಸಂಬಂಧಿಸಿ ಅರ್ಜಿಗಳನ್ನು ಸಾಮೂಹಿಕವಾಗಿ ತಿರಸ್ಕರಿಸಬಾರದು. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡಯಬೇಕಿದೆ. ವಿಚಾರಣೆ ಪೂರ್ಣಗೊಂಡು ಆದೇಶ ಬರುವವರೆಗೂ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ರೈತರು, ಮುಳುಗಡೆ ಸಂತ್ರಸ್ತರು ಹಾಗೂ ಭೂಹಕ್ಕು ವಂಚಿತರ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಶರಾವತಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಪ್ರಸ್ತಾವನೆಯ ಈಗಿನ ಸ್ಥಿತಿಗತಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಹಿಂದೆ ಕೈತಪ್ಪಿನಿಂದ ಕಂದಾಯ ದಾಖಲೆಗಳಲ್ಲಿ ಪಿಎಫ್ ಎಂದು ನಮೂದಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಹೀಗಾಗಿ ಪಿಎಫ್ ಎಂದು ತಪ್ಪಾಗಿ ನಮೂದಾಗಿರುವುದನ್ನು ಕೈ ಬಿಟ್ಟು ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು. 1978ಕ್ಕೂ ಪೂರ್ವದ ಒತ್ತುವರಿಗಳ ಸಕ್ರಮಾತಿಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಸಲ್ಲಿಸಲು ಈ ಹಿಂದೆ ವಿಧಿಸಿರುವ ಕೆಲವು ಷರತ್ತುಗಳಲ್ಲಿ ಸರಳೀಕರಣ ಅಗತ್ಯವಿದೆ. ಈ ಬಗ್ಗೆ ಟಿಪ್ಪಣಿ ನೀಡಿ ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ 2023ರಲ್ಲಿ ತಿದ್ದುಪಡಿಯಾಗಿದ್ದು, ಇದರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಈ ಹೊಸ ತಿದ್ದುಪಡಿ ಕಾಯ್ದೆಯಡಿಯಲ್ಲಿರುವ ಅವಕಾಶಗಳನ್ನು ಬಳಸಿಕೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟಿಪ್ಪಣಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೇಂದ್ರ ಸರ್ಕಾರ 2023ರ ತಿದ್ದುಪಡಿ ಕಾಯ್ದೆ ಅಧಿಸೂಚನೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ನೀಡಿದೆ. ಈ ಪರಿಹಾರಗಳನ್ನು ಗಮನದಲ್ಲಿಟ್ಟುಕೊಂಡು, ಸ್ಥಳೀಯ ಜನರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಈ ಕುರಿತು ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆಂದು ಬಿವೈಆರ್ ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಸಿಎಫ್ ಹನುಮಂತಪ್ಪ, ಡಿಸಿಎಫ್ ಶಿವಶಂಕರ್, ಸಾಗರ ಉಪವಿಭಾಗಾಧಿಕಾರಿ ಯತೀಶ್, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ಧರಾಮಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರೈತ ಮುಖಂಡರಾದ ಶ್ರೀಕರ, ತೀ.ನ.ಶ್ರೀನಿವಾಸ, ಮಲ್ಲಿಕಾರ್ಜುನ ಹಕ್ರೆ, ದೇವೇಂದ್ರಪ್ಪ, ರಾಜೇಶ್, ಪರಶುರಾಮ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.