

ಮಡಿಕೇರಿ:
ಕೊಡಗು ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸರ್ಕಾರ ಇದನ್ನು ಸರಿದಾರಿಗೆ ತರದಿದ್ದರೆ ಸದ್ಯದಲ್ಲೇ ವಿವಿಧ ಸಂಘಟನೆಗಳ ಸಹಕಾರದಿಂದ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕೊಡಗು ಜಿಲ್ಲಾ ಭೂಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅರವಿಂದ್ ಕುಟ್ಟಪ್ಪ ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ಹುಲಿ, ಆನೆ ದಾಳಿ ಸೇರಿದಂತೆ ವನ್ಯಜೀವಿ - ಮಾನವ ಸಂಘರ್ಷ ಈ ಮಟ್ಟದಲ್ಲಿ ಮಿತಿ ಮೀರಲು ಅರಣ್ಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣ. ವನ್ಯಜೀವಿ - ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ದೊಡ್ಡ ಮಟ್ಟದ ಅನುದಾನ ತಂದರೂ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಯಾವುದೂ ಸದುಪಯೋಗ ಆಗುತ್ತಿಲ್ಲ. ಬಹಳಷ್ಟು ಅಧಿಕಾರಿಗಳು ಕೊಡಗಿನಲ್ಲಿ ಸಾಕಷ್ಟು ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದು, ಇವರನ್ನೆಲ್ಲಾ ಕೂಡಲೇ ವರ್ಗಾ ಮಾಡಬೇಕು ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಅರಣ್ಯ ಇಲಾಖೆಯಲ್ಲಿ ಮಾಹಿತಿ ಹಕ್ಕು ಅಡಿ ಕೇಳುವ ಮಾಹಿತಿ ಕೊಡದೇ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಅಧಿಕಾರಿಗಳ ಭೇಟಿಗೆ ಸಾರ್ವಜನಿಕರು ಬಂದರೆ ಸಿಗದೆ ಸತಾಯಿಸುತ್ತಾರೆ. ಚಿಕ್ಕಪುಟ್ಟ ಕೆಲಸಗಳಿಗೂ ವರ್ಷಗಟ್ಟಲೆ ಅಲೆದಾಡುವ ಸ್ಥಿತಿ ಇದೆ. ಜಿಲ್ಲೆಯಲ್ಲಿ ಇರುವ ಸಿಸಿಎಫ್ ಹುದ್ದೆ ಖಾಲಿ ಇದ್ದು, ಇಲ್ಲಿಗೆ ಬೇರೆ ಜಿಲ್ಲೆಯವರನ್ನು ನಿಯೋಜಿಸಿದರೆ ಪ್ರಯೋಜನ ಇಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ವಾರದ ಎಲ್ಲಾ ದಿನಗಳಲ್ಲೂ ಎಲ್ಲಾ ಸಮಯದಲ್ಲೂ ಸಾರ್ವಜನಿಕರ ಭೇಟಿಗೆ ಸಿಗುವಂತಾಗಬೇಕು.
ರೈತರು ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅನುಮತಿ ಕೋರಿ ಸಲ್ಲಿಸಿರುವ ಹಲವಾರು ಅರ್ಜಿಗಳಿಗೆ ಬಹಳಷ್ಟು ವರ್ಷಗಳಿಂದ ಅನುಮತಿ ನೀಡದೇ ಸತಾಯಿಸಲಾಗುತ್ತಿದ್ದು, ಈ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅಧಿಕ ಭಾರದ ಟ್ರಕ್‌ಗಳ ಸಂಚಾರ ನಿರ್ಬಂಧಿಸಿದ್ದರೂ ಸಿಲ್ವರ್ ಮರಗಳ ಸಾಗಾಟ ಮುಂದುವರಿದಿದ್ದು, ಅಕ್ರಮಕ್ಕೆ ಕಾರಣವಾಗಿರುವ ಚೆಕ್‌ಪೋಸ್ಟ್ಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಅರಣ್ಯ ಇಲಾಖೆಯಲ್ಲಿ ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆಗಿದ್ದು, ಈ ಬಗ್ಗೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಕೆ. ಎ. ಆದಂ, ಕಾರ್ಯದರ್ಶಿ ಟಿ.ಎ. ಮನೋರಂಜನ್, ನಿರ್ದೇಶಕ ಯಾಹ್ಯ, ಕಾನೂನು ವಿಭಾಗದ ಪ್ರಮುಖರಾದ ಸಿ.ಬಿ. ಪೂವಣ್ಣ, ಸಾಮಾಜಿಕ ಜಾಲತಾಣ ಮುಖ್ಯಸ್ಥ ಹಂಸ ಸುದ್ದಿಗೋಷ್ಠಿಯಲ್ಲಿ ಇದ್ದರು.